Friday, 11 August 2017

ಅರಿವಿನ ಅಕ್ಕರೆ

   ಕನಕದಾಸ ಮತ್ತು ಸಾಮಾಜಿಕ ನ್ಯಾಯ 
       ಎಲ್ಲವೂ ವಿಚಿತ್ರ, ವಿಪರ್ಯಾಸ. ಆಧುನಿಕತೆ ಎನ್ನುವುದು ಮೌಢ್ಯತೆ ಅಜ್ಞಾನಗಳನ್ನು ಮೀರುವುದಾಗಬೇಕು ಅದಾಗುತ್ತಿಲ್ಲ. ರಾಜಕಾರಣ, ಧರ್ಮವ್ಯವಸ್ಥೆಗಳೆಲ್ಲ ಯಾವುದೋ ಸ್ವಾರ್ಥ, ತಂತ್ರಗಳ ಪಾಲಾದಂತೆ ಆಧುನಿಕತೆಯ ಪ್ರಗತಿಪರ ಎನ್ನಬಹುದಾದ ವಿಚಾರಗಳಾಚೆಗೆ ‘ಜಾತಿ’ಯಂತಹ ಸೂಕ್ಷ್ಮ ಸಂಗತಿಗಳನ್ನೆ ಕೇಂದ್ರವಾಗಿಸಿಕೊಂಡು ತಮ್ಮ ಲಾಭಕ್ಕನುಗುಣವಾಗಿ ವಿವೇಚಿಸುತ್ತಿವೆ. ಜಾತಿವ್ಯವಸ್ಥೆಯನ್ನೇ ಪುನರುತ್ಥಾನಗೊಳಿಸುತ್ತಾ ತನ್ಮೂಲಕ ಸಾಮಾಜಿಕ ನ್ಯಾಯದ ನಂಬಿಕೆಗಳನ್ನೇ ಬುಡಮೇಲು ಮಾಡಲು ಯತ್ನಿಸುತ್ತಿವೆ. ಅಂತಹ ಹೊತ್ತಿನಲ್ಲಿ ಮತ್ತೆ ಮತ್ತೆ ಮಾನವೀಯತೆ ಪರವಾಗಿ ಸಾಮಾಜಿಕ ನ್ಯಾಯದ ಪರವಾಗಿ, ನಿಂತ ಮಹನೀಯರು ಕಾಡುತ್ತಾರೆ. ಅಂತಹವರಲ್ಲಿ ಕನಕದಾಸರು ಬಹುಮುಖ್ಯರು. ವರ್ಷಕ್ಕೊಮ್ಮೆ ‘ಜಯಂತಿಗಳ’ ನೆಪವಾಗದಂತೆ, ಜನಮಾನಸದ ಆರೋಗ್ಯಕರ ಚಿಂತನೆಗೆ ಇವರು ನಿತ್ಯ ನಿಕಷವಾಗುತ್ತಾರೆನ್ನುವುದು ಕತ್ತಲಿನ ನಡುವಿನ ಬೆಳಕು.
        ಇದು ಬೌದ್ಧಿಕವಾಗಿ ಇಲ್ಲವಾಗಿರುವವರು, ತಮ್ಮ ಚಿಂತನೆ ಮತ್ತು ಸತ್ಯಾನ್ವೇಷಣೆಯ ಸ್ವರೂಪಕ್ಕೆ ಸಂಕೇತವಾಗಿ ಉಳಿದು ಅನಿವಾರ್ಯತೆಯ ಅರ್ಥವಾಗಿ ಕಾಡುವುದರ ಬಗೆ. ತನ್ಮೂಲಕ ನಾವು ನಮ್ಮ ವ್ಯಕ್ತಿಗೌರವವನ್ನು ಜತನವಾಗಿಸಿಕೊಳ್ಳುವ ಪ್ರಯತ್ನ. ಮನನದ ರೂಪವಾಗಬೇಕಾದ್ದೇ ಈ ಹೊತ್ತಿನ ತುರ್ತು. ಆರಂಭದ ಮಾತುಗಳಲ್ಲಿ ಗಮನಿಸಿದ ಹಾಗೆ ನಾವಿಂದು ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣಸ್ಥಿತಿಯಲ್ಲಿ ಕವಲು ಹಾದಿಯಲ್ಲಿ ನಿಂತಿದ್ದೇವೆ.
        ‘ಸಂಸ್ಕೃತಿ’ ಎನ್ನುವ ಮಾತು ಜೀವಪರ ಕಾಳಜಿಯ ಮಾನವೀಯತೆಯನ್ನು ಗೌರವಿಸುವ ಸಂಗತಿಗೆ ಸಂಬಂಧಿಸಿದ್ದು. ಮುಂದುವರಿದ ರೂಪವಾದ ನಾಗರೀಕತೆ, ಅಭಿವೃದ್ಧಿಯ ಅರ್ಥವನ್ನು ಪ್ರತಿಪಾದಿಸುತ್ತಲೇ ಒಂದಷ್ಟು ವಿಲಾಸೀತನವನ್ನು ರೂಢಿಸಿತು. ಈ ಹೊತ್ತಿನ ಮತ್ತೂ ಮುಂದುವರಿದ ರೂಪ ಆಧುನಿಕತೆಯ ಹೆಸರಿನಲ್ಲಿದೆ. ಎಲ್ಲವೂ ಅಂತಿಮ ರೂಪದಲ್ಲಿದೆ ಎನ್ನಬಹುದಾದ ಇದು ತನ್ನ ಉತ್ಕರ್ಷ ಸ್ಥಿತಿಯಿಂದಲೇ ವಿನಾಶದೆಡೆಗೂ ಚಲಿಸಿರಬಹುದೆ? ಎನ್ನುವ ಅನುಮಾನ ಕಾಡದಿರುವುದಿಲ್ಲ. ಇದು ನಾವು ಏನಾಗಿದ್ದೇವೆ? ಎತ್ತಸಾಗಿದ್ದೇವೆ? ಎಂದು ಆತ್ಮಾವಲೋಕನ ಮಾಡುವ, ಮಾಡಿಸುವ ಪರಿ. ಸಾಮಾಜೀಕರಣದ ಮುಖಾ-ಮುಖಿಯಾಗಬೇಕಾದ ಸಾಮಾನ್ಯರ ಬದುಕು ಧರ್ಮ-ರಾಜಕಾರಣ ವಾಗುತ್ತಿರುವುದು ಒಳಿತಿನ ಸೂಚನೆಯಂತೂ ಖಂಡಿತಾ ಅಲ್ಲ.... “ನಿಮ್ಮ ನಿಮ್ಮ ಮನವ.... ತನುವ ಸಂತೈಸಿಕೊಳ್ಳಿ” ಎಂದು ಹೇಳುವುದು ಸುಲಭವಾಗಿಲ್ಲ.... ಕನಕದಾಸ ನಮ್ಮೊಳಗಿನ ಚೇತನವಾಗಿ ಕಾಡಬೇಕಿರುವುದು ಇಂತಲ್ಲಿಯೇ....
ಇತಿಹಾಸ ಪುರುಷನಾದ ಕನಕದಾಸ ನಮ್ಮ ನಡುವೆಯೇ ಬಾಳಿ ಬದುಕಿದವನು. ಪ್ರಯೋಗಶೀಲತೆಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಲೇ ಸಾಧನೆಯನ್ನು ಸಹಜವಾಗಿಸಿಕೊಂಡವನು. ಹಾಗಾಗಿಯೂ ಕನಕದಾಸರು ಐತಿಹ್ಯ-ದಂತಕತೆಗಳ ನಡುವೆಯೂ ಸಾಂಕೇತಿಕ ನೆಲೆಯಲ್ಲಿ ನಂಬಿಕೆಯಂತೆಯೂ ಕಾಣಸಿಗುವುದುಂಟು.
        ಬಾಲ್ಯದಲ್ಲಿಯೇ ಗುರುಗಳು ಬಾಳೆಹಣ್ಣು ತಿನ್ನಲು ನೀಡಿದ ಪ್ರಸಂಗದಲ್ಲಿ ‘ಎಲ್ಲೆಲ್ಲಿಯೂ ದೇವರಿರುವನು’ ಎನ್ನುವುದನ್ನು ಪ್ರತಿಪಾದಿಸಿದ ನೆಲೆಯಿಂದ ಆರಂಭಗೊಂಡು ಮುಂದೆ ತಿರುಪತಿಯಲ್ಲಿ ಭೂಕಂಪ ನಿಲ್ಲಿಸಿದ್ದು, ರಥ ಎಳೆದದ್ದು ಮುಂತಾದ ಕಥಾನಕಗಳ ಮೂಲಕ ಮತ್ತೆ ಮತ್ತೆ ದೈವ ಸಾಕ್ಷಾತ್ಕಾರದ ಅರ್ಥಕ್ಕೆ ಪೂರಕವಾಗಿಯೇ ಕಾಣಿಸಿಕೊಳ್ಳುತ್ತಾರೆ. ಭಗವಂತನ ಪ್ರೀತಿಗೆ ಸಂಬಂಧಿಸಿದ ‘ದೇವರು ತಮ್ಮವನೆಂಬ’ ಧರ್ಮಪರವಾದಿಗಳ ನಂಬಿಕೆಯನ್ನು ಪ್ರಶ್ನಿಸುವ ಪ್ರಜ್ಞೆಯಾಗಿಯೂ ಈ ಬಗೆಯ ಕಥಾನಕಗಳನ್ನು ಪರಿಭಾವಿಸಬಹುದು. ದೇವರು, ದೇವಸ್ಥಾನ, ಧರ್ಮ ಇತ್ಯಾದಿಗಳನ್ನು ಗುತ್ತಿಗೆ ಹಿಡಿದಂತೆ ವರ್ತಿಸುವವರ ಆಚೆಗೆ ತಳಸಮುದಾಯದವರ ಹಕ್ಕಾಗಿ ದೇವರನ್ನು ತನ್ನದಾಗಿಸಿಕೊಳ್ಳುವ ಹಪ-ಹಪಿಯಿದು. ಒಬ್ಬ ಕನಕನ ಕತೆಯ ಮನನವೇ ನಮ್ಮ ಬದುಕಿನ ಸಾರ್ಥಕತೆಯ ಕೊನೆಯ ಕನವರಿಕೆಯಲ್ಲ. ಅಂತಹ ಹಾದಿಯ ಹುಡುಕಾಟ ಇತರರದ್ದಾಗಬೇಕು. ತನ್ಮೂಲಕ ನಿಜವಾಗಿ ಒಂದಿಷ್ಟು ಬದುಕುವುದು ಸಾಧ್ಯವಾಗಬೇಕು. ಅಂದರೆ ‘ನಮ್ಮೊಳಗೂ ಒಬ್ಬ ಕನಕನನ್ನು ಕಟ್ಟಿಕೊಳ್ಳಲಾದೀತೆ?’ ಎನ್ನುವುದೇ ಬದ್ಧತೆಯಂತಾಗಬೇಕು. ಕನಕದಾಸ ಪುರಾಣವಲ್ಲ, ಇತಿಹಾಸವೆಂಬ ಅರಿವಿನಿಂದಲೇ ‘ವರ್ತಮಾನ’ ವಾಗಿಸಿಕೊಳ್ಳುವ ಎಚ್ಚರವೇ ಆಯ್ಕೆಯಾಗಬೇಕು. ಕನಕದಾಸರಂತಹವರ ಬದುಕೇ ನಮ್ಮ ನೆರಳಾಗಬೇಕು. ತನ್ಮೂಲಕ ಅದು ಎಚ್ಚರವಾಗಿರಬೇಕು ಅಂದರೆ ಸಾಧ್ಯತೆಗಳ ಹುಡುಕಾಟದ ‘ಪ್ರಜ್ಞೆ’ಯೇ ಈ ಹೊತ್ತಿಗೆ ‘ಅನ್ವಯ’ದ ಅರ್ಥದಲ್ಲಿ ತುರ್ತಾಗಬೇಕು.
    “ಏಕೆ ನಡುಗಿದೆ ತಾಯಿ ಭೂಮಿ, ನಡುರಾತ್ರಿಯೊಳು?
ಧರೆಯೊಳಗೆ ಕರ್ಮಿಗಳು ಹೆಚ್ಚಿ....
ನರಕುರಿಗಳೆಲ್ಲ ನಡೆಗೆಟ್ಟರೆಂದು”

        ಇದು ಒಂದು ಕೀರ್ತನೆಯ ಭಾಷೆ-ಪ್ರತಿಮೆ ಎಂಬ ಮಿತಿಯಲ್ಲ ಇದೊಂದು ದರ್ಶನ. ಪ್ರಕೃತಿಯ ವಿಕೋಪವನ್ನು ಹೇಳುತ್ತಲೇ ಅದು ನಡೆಯುವ ಹೊತ್ತಿಗೆ ಸಾಮಾನ್ಯರ ಬದುಕಿನಲ್ಲಿ ಬದುಕಿನ ಪ್ರೀತಿ, ನಿಸರ್ಗನ್ಯಾಯಗಳಲ್ಲಿ ಕಳೆದುಹೋಗಿರುವುದರ ಅರಿವಿನ ದುರಂತವೂ ಹೌದು. ಈ ಹೊತ್ತಿಗೂ ಇದನ್ನು ಅನ್ವಯಿಸಿಕೊಂಡು ನೋಡಿದರೆ ನಮ್ಮ ನಡುವಿನ ವಿಪರ್ಯಾಸಗಳೆಲ್ಲಾ ಸ್ಪಷ್ಟವಾಗಿಬಿಡುತ್ತವೆ. ಪ್ರಕೃತಿಯಂತಹ ದೊಡ್ಡ ಸಂಗತಿಯ ನಡುವೆ ನಾವೆಷ್ಟು ಸಣ್ಣವರೆಂಬ ವ್ಯಾಖ್ಯಾನವಿಲ್ಲಿದೆ. ‘ನಡತೆ’ ಎನ್ನುವುದು ಎಲ್ಲಾ ಕಾಲಕ್ಕೂ ಮೌಲ್ಯವೇ ಆಗಿರಬೇಕಾದ ಬಗೆಯನ್ನಿದು ಪ್ರಸ್ತಾಪಿಸುತ್ತಿದೆ. ಸ್ವಂತಿಕೆಯನ್ನು ಕಳೆದುಕೊಳ್ಳುವುದರ, ಸಮೂಹಸನ್ನಿಯಲ್ಲಿ ಹಾಳಾಗಿಹೋಗಬಹುದಾದುದರ ಅಪಾಯವೇ ನರ-ಕುರಿಗಳಾದ ರೂಪಕದಲ್ಲಿದೆ. ಜ್ಞಾನದ ಬಗೆಗಿನ ಹೊಸ ಚಿಂತನೆಯ ಮಾದರಿ ಇಲ್ಲಿದೆ. ಜ್ಞಾನ ಯಾರ ಸ್ವತ್ತೂ ಅಲ್ಲ ಅದು ವ್ಯಕ್ತಿತ್ವದ ಹಿರಿಮೆಯೂ ಹೌದು. ಕನಕ ಸಂತನಾದ ಬಗೆಯೇ ಹೀಗಿದೆ.
        “ಅಡಿಗೆಯನ್ನು ಮಾಡಬೇಕಣ್ಣ,
ನಾನೀಗ ಜ್ಞಾನದಡಿಗೆಯನ್ನು ಮಾಡಬೇಕಣ್ಣ”
       ಅಡಿಗೆ ಮತ್ತು ಹಸಿವಿನ ಅರ್ಥದ ಪರಾಕಾಷ್ಠತೆಯನ್ನಿಲ್ಲಿ ಗಮನಿಸಬೇಕು. ವ್ಯಕ್ತಿನಿಷ್ಠವಾದ ‘ಅರಿವಿ’ನ ಬಗೆಯಿದು. ತನಗಾಗಿ ತಾನು ತನ್ನಿಂದಲೇ ಸಂಪಾದಿಸಿಕೊಳ್ಳಬೇಕು. ಇದೊಂದು ಹೋರಾಟವೂ ಹೌದು. ತನ್ನ ಅಡಿಗೆಯನ್ನು ತಾನೇ ಮಾಡಿಕೊಳ್ಳುವ ಸಂಕೇತವಾದರೂ ಇಂತದ್ದೇ ಆಗಿದೆ. ಇದು ಮಾಗುವ ಪ್ರಕ್ರಿಯೆ. ಆತ್ಮವಿಶ್ವಾಸದ ಹಾದಿ. ಸಾಧಿಸುವ ಹಂಬಲದ ತೀವ್ರತೆ.
        “ಹೃದಯ ಹೊಲವನು ಮಾಡಿ
ತನುವ ನೇಗಿಲ ಮಾಡಿ
ನಾಲಗೆಯ ಕೂರಿಗೆ ಮಾಡಿ ಬಿತ್ತಿರಯ್ಯ”
  
        ಒಳ-ಹೊರಗುಗಳ ಸತ್ವದ ಸಂಘರ್ಷ-ಸಮನ್ವಯಗಳ ಅರ್ಥವಿದು. ಅಜ್ಞಾನದಿಂದ ಜ್ಞಾನದೆಡೆಗೆ ಚಲಿಸುವಂತಹ ಮಾತು ಕೇವಲ ಮಾತಾಗಿ ಮಾತ್ರವೇ ಉಳಿಯದೆ ಪ್ರಯೋಗವಾಗಬೇಕಿರುವ ಸಾಧ್ಯತೆಯನ್ನಿದು ಕುರಿತಂತಿದೆ. ಕೇವಲ ಮಾತು-ಮನನಗಳಲ್ಲದೆ, ಬದುಕು ಕ್ರಿಯೆಯೇ ಆಗುವ, ತನ್ನನ್ನು ಒಡ್ಡಿಕೊಂಡೇ, ಒಗ್ಗಿಸಿಕೊಳ್ಳುವ ಅವಕಾಶದ ಮುಕ್ತತೆಯ ಬಗೆಗೆ ಪ್ರಸ್ತಾಪವಿದೆ. ಶತಮಾನಗಳಿಂದ ಶೋಷಣೆಗಳಿಂದ ನಲುಗಿಹೋದ ತಳಸಮುದಾಯದ ಬಹುಜನರನ್ನು ಎಚ್ಚರಿಸುವ ಪರಿಯಿದು. ನಮ್ಮನ್ನು ಯಾರೋ ಉದ್ಧಾರ ಮಾಡುತ್ತಾರೆಂದೇ ಕಾದು ಕುಳಿತೇ ಶತಮಾನಗಳು ಉರುಳಿಹೋಗಿರುವಾಗ ನಮ್ಮನ್ನು ನಾವೇ ಹದಗೊಳಿಸಿಕೊಳ್ಳಬೇಕಿರುವುದೇ ವಾಸ್ತವ ಮತ್ತು ಅನಿವಾರ್ಯ. ವ್ಯಕ್ತಿಶಕ್ತಿಯಾಗಲೇಬೇಕಾದ, ಇಲ್ಲವಾದರೆ ಬದುಕೇ ಕಳೆದುಹೋಗಬಹುದಾದ ಆತಂಕವನ್ನು ಗ್ರಹಿಸಬೇಕಿದೆ. ಅಂದರೆ ಕನಕದಾಸರು ಎಲ್ಲ ಸಾಮಾನ್ಯರಂತಿದ್ದು ಬದುಕಿನಿಂದಲೇ ಅರಿವಿನೆಡೆಗೆ ಚಲಿಸಿದವರು. ‘ದಂಡನಾಯಕ’ ಎನ್ನುವ ವೃತ್ತಿಯನ್ನು ಅವಲಂಬಿಸಿದ್ದ ಹೊತ್ತಿಗೂ ಅದನ್ನು ಮೀರಿ ಮತ್ತೇನೋ ಇದೆ ಎಂದೇ ಹುಡುಕಾಟಕ್ಕೆ ಪರ್ಯಾಯವಾದವರು. ‘ದಾಸ’ನಾದ ಪ್ರಕ್ರಿಯೆಗೆ ಹಲವು ರೂಪಗಳಿದ್ದಿರಬಹುದು ಆದರೆ ಹಿಂಸೆಯಿಂದ-ಅಹಿಂಸೆಯೆಡೆಗೆ, ತ್ಯಾಗದ ಸತ್ಯದೆಡೆಗೆ ಮುಖಾ-ಮುಖಿಯಾದದ್ದು ಮಾತ್ರ ಗಮನಾರ್ಹ ವಾಸ್ತವ, ಅದು ಅಲ್ಲಿಗೇ ನಿಂತದ್ದೂ ಅಲ್ಲ, ‘ದಾಸ’ ಎನ್ನುವುದು ಭಕ್ತನ ಪ್ರಾರ್ಥನೆ, ಕೀರ್ತನೆಯ ನೆಲೆಯನ್ನು ಮೀರಿ ಕವಿ, ಚಿಂತಕ, ಸಂತ ಮತ್ತು ದಾರ್ಶನಿಕನ ಎತ್ತರವನ್ನು ತಲುಪಿದ್ದು ಸಾಧನೆಯ ಫಲಿತವೂ ಹೌದು.
       ಕನಕದಾಸರ ಸಾಧನೆಯ ಬದುಕಿನ ಫಲಿತವೇ ಅವರನ್ನು ಸಾಮಾಜಿಕನ್ಯಾಯದ ಹರಿಕಾರರನ್ನಾಗಿಯೂ ರೂಪಿಸಿತ್ತು ಮತ್ತು ಇದು ಸಹಜ ಎನ್ನುವಂತೆಯೂ ಬೆಳೆದದ್ದಾಗಿತ್ತು. ಭಾವ-ಸ್ವಭಾವಗಳ ಮುಖಾ-ಮುಖಿಯೊಂದಿಗೆ ಅನುಸಂಧಾನಗೊಂಡದ್ದಾಗಿತ್ತು. ನಿಜದ ಕನಕನ ಅಸ್ತಿತ್ವವಿದ್ದದ್ದೇ ಇಲ್ಲಿ ಎನ್ನಬಹುದು.  
       ದಾಸ ಸಾಹಿತ್ಯವನ್ನು ಕುರಿತು ಲಕ್ಕಪ್ಪಗೌಡರು “ಇದು ವಚನದ ಪರ್ಯಾಯವಲ್ಲ ಸಂಪ್ರದಾಯಶೀಲ ಪರಂಪರೆ ಒಪ್ಪಿಕೊಂಡ, ಬಂಡಾಯ ದೃಷ್ಟಿ ಇಲ್ಲದ ಮೇಲುವರ್ಗದ ಸಾಹಿತ್ಯ” ಎನ್ನುತ್ತಾರೆ.
       ವಚನಸಾಹಿತ್ಯದ ಸಾಮಾಜಿಕ, ಸಾಂಸ್ಕೃತಿಕ, ಪ್ರಗತಿಪರ ಚಿಂತನೆಗಳಿಗಿಂತ ಭಿನ್ನವಾದದ್ದು ದಾಸಸಾಹಿತ್ಯ ಎಂಬ ಮಾತನ್ನಿದು ಧ್ವನಿಸುತ್ತದೆ. ಆದರೆ ಈ ಬಗೆಯ ಮಾತಿಗೆ ಕನಕದಾಸರು ಅಪವಾದವಾಗಿ, ಹೊರತಾಗಿ ನಿಲ್ಲುತ್ತಾರೆ. ಕನಕದಾಸರ ಚಿಂತನೆ, ಸಾಮಾಜಿಕ ಕಳಕಳಿ ವಚನ ಚಳುವಳಿಯ ಮುಂದುವರಿದ ರೂಪದಂತೆ ಕಾಣುತ್ತದೆ.
        ಕನಕದಾಸರು ಹುಟ್ಟಿದ್ದು ಶ್ರಮಿಕನೆಲೆಯ ಕೆಳವರ್ಗದಲ್ಲಿ. ಅವರು ಬೆಳೆದದ್ದು ಸ್ವಯಂಸಹಜ ಪ್ರತಿಭೆ ಮತ್ತು ಶಕ್ತಿಯ ಮೂಲಕ ಹಾಗಾಗಿ ಬದುಕು ಅವರಿಗೆ ಹೋರಾಟದ ರೂಪವಾಗಿತ್ತು. ಅಧಿಕಾರ, ಕೀರ್ತಿ, ಪ್ರತಿಷ್ಠೆ, ವೈಭವ ಹೀಗೆ ಒಬ್ಬ ಸಾಮಾನ್ಯ ಮನುಷ್ಯ ಬಯಸಬಹುದಾದ ಎಲ್ಲಾ ವಿಲಾಸಿತನಗಳಿದ್ದಾಗ್ಯೂ ಅದನ್ನೆಲ್ಲಾ ಮೀರಿ ಅಷ್ಟಲ್ಲದೆ ಅವನ್ನು ಬಿಟ್ಟು ಬದುಕುವ ತ್ಯಾಗವೂ ಕನಕದಾಸರಿಗೆ ಸಾಧ್ಯವಾಯಿತು. ಇದು ಅವರ ಸಾಧನೆಯ ಹಾದಿಯಲ್ಲಿ ದಕ್ಕಿಸಿಕೊಂಡ ಪ್ರಬುದ್ಧತೆಯೂ ಆಗಿತ್ತೆನ್ನಬಹುದು. ‘ದಾಸತ್ವ’ವನ್ನು ಒಪ್ಪಿಕೊಂಡ ಹೊತ್ತಿಗೂ ಆ ಹಾದಿ ಅವರಿಗೆ ಸುಲಭವಾದುದಾಗಿರಲಿಲ್ಲ. ಮೇಲುವರ್ಗದವರಿಗಿದ್ದ ಭ್ರಮೆಗಳು ಅವರನ್ನು ದೂರ ಸರಿಸುವಂತಹ ತಿರಸ್ಕಾರವನ್ನು ಸವಾಲಿನೋಪಾದಿಯಲ್ಲಿಯೇ ಉಂಟುಮಾಡಿದ್ದವು. ಆದರೆ ಫಲಿತ ಬೇರೆಯೇ ಆಗಿತ್ತು. ವ್ಯಾಸತೀರ್ಥರಿಂದಲೇ ಮನ್ನಿಸಲ್ಪಟ್ಟ ಕನಕದಾಸರು ಪುರಂದರದಾಸರೊಂದಿಗೆ ಅನ್ಯೂನ್ಯತೆಯನ್ನು ಹೊಂದಿದರು. ಅಲ್ಲಿಯೂ ಪುರಂದರರೂ ಮೇಲುವರ್ಗದ ನೇರ ಪ್ರತಿನಿಧಿಗಳಾಗಿರಲಿಲ್ಲವೆನ್ನುವುದು ಗಮನಾರ್ಹ. ವರ್ತಮಾನಗಳಲ್ಲಿನ ಯಾವುದೇ ಬಗೆಯ ಬದುಕಿಗೆ ನಿರಂತರತೆ, ಶಾಶ್ವತತೆ ಒದಗಿ ಬರುವುದು ಅವು ಇತಿಹಾಸಗಳಾದಾಗಲೇ ಎನ್ನಬಹುದು. ಅಂದರೆ ಇದು ಶಾಶ್ವತತೆಯ ಸ್ವರೂಪವೂ ಹೌದು. ಹಾಗಾಗಿಯೂ ಕನಕದಾಸರು ಮತ್ತೆ ಮತ್ತೆ ಪ್ರಸ್ತುತರಾಗುತ್ತಾರೆ. ವರ್ತಮಾನದಲ್ಲಿ ಇದ್ದೇ ಭವಿಷ್ಯತ್ತನ್ನು ಸೂಚಿಸುವಂತಾಗುತ್ತಾರೆ. ‘ಕೀರ್ತನೆ’ ಕೇವಲ ಭಗವಂತನ ಆರಾಧನೆಯ ಮಿತಿಯಾಗದೆ ‘ಪಟ್ಟಪಾಡಿನ ಹಾಡುಗಳೂ’ ಆಗುವುದು ಈ ಬಗೆಯ ಕಾರಣಕ್ಕಾಗಿ.  ಇದು ಅವರನ್ನು ಕವಿಯಾಗಿಯೂ ವಿಕಾಸಗೊಳ್ಳುವುದರೆಡೆಗೆ ನಿರ್ದೇಶಿಸಿದೆ. ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಕೃತಿಗಳ ನಡುವೆ ಒಬ್ಬ ಮಹತ್ವದ ಕವಿಯಾಗಿ ಕಾಣಿಸಿಕೊಳ್ಳುವ ಕನಕದಾಸರು ‘ರಾಮಧಾನ್ಯ ಚರಿತ್ರೆ’ ಕೃತಿಯ ಮೂಲಕ ಕವಿಯಾಗಿ, ಚಿಂತಕರಾಗಿ, ಸಾಮಾಜಿಕ ಹರಿಕಾರರಾಗಿ ದಾಖಲಾಗುವ ಬಗೆಯೇ ಅನನ್ಯವಾದುದು.
         ಕನಕದಾಸರ ‘ಕೀರ್ತನೆಗಳು’ ಇತರ ದಾಸರ ಕೀರ್ತನೆಗಳಂತೆ ಹೊಗಳುವ ಮಿತಿಯಲ್ಲೇ ದಾಖಲಾಗುವ ಬಗೆಯಲ್ಲ. ಅದು ಕವಿ ಪ್ರತಿಭೆಯ ಮೂಲವೂ ಆಗುವುದರಿಂದ ಮನಸ್ಸು ಮತ್ತು ಭಾವಸಂವೇದನೆಗಳಿಗೂ ವಿಶಿಷ್ಟತೆಯಿದೆ. ಕೀರ್ತನೆಗಳಲ್ಲಿ ಕಾವ್ಯಗುಣ ಪ್ರಾಶಸ್ತ್ಯಪಡೆದುಕೊಳ್ಳುತ್ತದೆ. ಕೀರ್ತನೆಗಳಲ್ಲಿ ಉಪಮೆ, ದೃಷ್ಟಾಂತಗಳ ಜೊತೆಗೆ ವೈಯಕ್ತಿಕ ಅನುಭವದ ಲೋಕಾನುಭವವು ಹರಳುಗಟ್ಟಿರುವುದು ಗಮನಾರ್ಹ. ಈ ಬಗೆಯ ಅನುಭವಗಳಿಗೆ ತಳಸಮುದಾಯದ ಪ್ರಜ್ಞೆಯೇ ನಿರಂತರವಾದ ಶಕ್ತಿಯಾಗಿಯೂ ಕೆಲಸಮಾಡಿದೆ. ಇದು ಬದುಕನ್ನು ಸಹಜವಾಗಿ ಅಷ್ಟೇ ಸತ್ಯವಾಗಿ ಅಂದರೆ ನೆಲಸ್ಪರ್ಶಿಸಿದಂತೆ ತಾಜಾತನದಿಂದ ಪಡೆದುಕೊಂಡ ಮಣ್ಣಿನಗುಣವನ್ನು ಸ್ಪಷ್ಟಪಡಿಸುತ್ತದೆ. ಈ ಮಣ್ಣಿನಗುಣದ ಅರ್ಥವಾದರು ದೇವರನ್ನು ಹೊಂದಿಯೇ ತೀರುವ ಭ್ರಮೆಯ ಬದುಕಲ್ಲ. ಹಾಗೆಯೇ ಸ್ಪರ್ಶಿಸಲಾಗದ ಅಸಹಾಯಕತೆಯೂ ಅಲ್ಲ. ಆ ಸಂಬಂಧಿಯಾದ ಯಾವುದೇ ಅಹಂಕಾರವೂ ಇಲ್ಲ. ದಾಸರು ‘ಮಾಧ್ವ’ರಮಧ್ಯ ಉಳಿದಾಗಲೂ ಕನಕದಾಸರ ಸಾಚಾ, ಸಹಜ, ದೇಸೀ ಬದುಕು ಅಳಿಯಲಿಲ್ಲ ಎಂಬುದೇ ಅವರ ವ್ಯಕ್ತಿತ್ವದ ವಿಶೇಷ. ದೈವಲೀಲೆ ಕುರಿತ ವರ್ಣನೆ, ಅದರೊಂದಿಗೆ ಆತ್ಮನಿವೇದನಾ ಸ್ವರೂಪದ ಮುಖಾ-ಮುಖಿ ಮತ್ತು ಮುಖ್ಯವಾಗಿ ಸಮಾಜ ವಿಮರ್ಶೆ ಕನಕದಾಸರ ‘ಕೀರ್ತನೆ’ಗಳ ಮುಖ್ಯಲಕ್ಷಣ. ಇದು ಅವರ ಇತರ ಕೃತಿಗಳಲ್ಲಿಯೂ ಹಾಸುಹೊಕ್ಕಾಗಿದೆ. 
        ಬಾಡಾದಿಂದ ಆರಂಭಗೊಂಡ ಬದುಕು ಕಾಗಿನೆಲೆವರೆಗೆ ವಿಸ್ತರಿಸುತ್ತದೆ. ಇದು ತಿಮ್ಮಪ್ಪ ಕನಕನಾಯಕನಾಗಿ ನಂತರಕ್ಕೆ ಸಂತನಾದ ಬಗೆ. ಅಂದರೆ ವೈಭವದಿಂದ ವೈರಾಗ್ಯದ ಕಡೆಗೆ ಚಲನೆ. ಕನ್ನಡದ ಆದಿ ಕವಿ ಪಂಪನನ್ನು ಗುರುತಿಸುವಂತೆ ಕನಕದಾಸ ವೃತ್ತಿಮೂಲದಿಂದ ಕಲಿ, ಪ್ರವೃತ್ತಿಯಿಂದ ಕವಿ, ಆರಿಸಿಕೊಂಡ ಬದುಕಿನ ಬದ್ಧತೆಯಿಂದ ಸಂತ, ಇದು ಕನಕರ ಸಾರ್ಥಕ ಉತ್ಕರ್ಷ. ಇತರ ದಾಸರಿಂದ ಸಾಮಾಜಿಕ ಸುಧಾರಣೆಯ ಮಾತನ್ನೇ ಕಲ್ಪಿಸಲಿಕ್ಕಾಗದು ಎಂದಾಗ ಕನಕದಾಸರೇ ಆಶಾವಾದ ಇಲ್ಲವಾಗಿದ್ದರೆ ಇಡೀ ಕೀರ್ತನೆಗಳು ಭಕ್ತಿ-ಆರಾಧನೆಯ ಸ್ವರೂಪದಲ್ಲೇ ಉಳಿದು ಬಿಡಬಹುದಿತ್ತು. ಪುರಂದರರ ಕೆಲವು ಕೀರ್ತನೆಗಳನ್ನು ಹೊರತುಪಡಿಸಿದರೆ ಮತ್ತಾವ ದಾಸರೂ ತಮ್ಮ ಕೀರ್ತನೆಗಳಲ್ಲಿ ಸಮಷ್ಟಿ ಬದುಕನ್ನೆ ಕುರಿತಂತೆ ಏನನ್ನೂ ಗಂಭೀರವಾಗಿ ಹೇಳಲಿಲ್ಲವೆನ್ನುವುದಿಲ್ಲಿ ಸ್ಮರಣಾರ್ಹ.
        ಕನಕದಾಸರ ಮೋಹನ ತರಂಗಿಣಿ ಭಕ್ತಿ, ಪ್ರೇಮ, ಶೃಂಗಾರವೇ ಮೊದಲಾದ ರಮ್ಯ ಭಾವಸಂಘರ್ಷದ ಕಥನವಾದರೆ, ನಳಚರಿತ್ರೆ ಬದುಕಿನ ವಿಷಣ್ಣತೆಯನ್ನು, ಗೂಢತೆಯನ್ನು ಕುರಿತು ತಲ್ಲಣ ಹುಟ್ಟಿಸುವ ಕಾವ್ಯ. ಕನಕದಾಸರ ಸಾಮಾಜಿಕ ಕಳಕಳಿಯ ಬಗೆಗಿನ ಬದ್ಧತೆಯನ್ನು ‘ರಾಮಧಾನ್ಯ ಚರಿತ್ರೆ’ ದಾಖಲಿಸಿದರೆ, ‘ಹರಿಭಕ್ತಿಸಾರ’ ಕೃತಿಯು ಆಧ್ಯಾತ್ಮದ ಅರ್ಥವಂತಿಕೆಯನ್ನು ಪರಿಶೀಲಿಸುತ್ತದೆ. ಇದು ಕವಿಯಾಗಿ ಕನಕದಾಸರು ಕ್ರಮಿಸಿದ ಯಶಸ್ಸಿನ ಹಾದಿ.
        ಈ ಹೊತ್ತಿಗೆ ಕನಕದಾಸರನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ಅವರನ್ನು ಕತೆಯಾಗಿ ಗ್ರಹಿಸಬೇಕಿಲ್ಲ. ಭಾವವಾಗಿಯೇ ಗ್ರಹಿಸಿಕೊಂಡು ವರ್ತಮಾನಕ್ಕೆ ಅನುಸಂಧಾನಮಾಡಿಕೊಳ್ಳುವುದಾಗಬೇಕು. ತಲ್ಲಣಗಳಿಗೆ ಅರ್ಥವಾಗಿಯೇ ಕನಕದಾಸರ ಬದುಕು-ಚಿಂತನೆಗಳು ನಮಗೆ ಅರ್ಥವಾಗಬೇಕು. ಅವರ ಹೋರಾಟದ ಬದುಕಿಗೆ ನಾವು ಮುಖಾ-ಮುಖಿಯಾಗಬೇಕು. ಆಗ ಮಾತ್ರ ಕನಕದಾಸರು ಸಾರ್ಥಕತೆಯ ಪ್ರತಿಮೆಯಾಗಿ ನಮ್ಮ ನಡುವೆ ನಿರಂತರತೆಯನ್ನು ಹೊಂದಬಲ್ಲರು.
         ಕನಕದಾಸರಿಗಿದ್ದ ಭಕ್ತಿ-ಧರ್ಮದ ಬಗೆಗಿನ ಅರಿವಾದರೂ ಸಮಗ್ರ ಒಳನೋಟದ ಅರ್ಥವಾಗಿತ್ತು. ಇತರ ದಾಸರು ದೇವರು, ಭಕ್ತಿ ಎನ್ನುವಲ್ಲಿ ಕೇವಲ ‘ಶ್ರೀ ಹರಿ’ ಯಲ್ಲಿ ಮಾತ್ರ ತಮ್ಮ ನಿಷ್ಠೆಯನ್ನು ತನ್ಮೂಲಕ ಅವನಾಚೆಗೆ ಬೇರೆ ದೇವರಿಲ್ಲ, ಮುಖ್ಯವಲ್ಲ ಎನ್ನುವ ಅಖಂಡತೆಯನ್ನು ಪ್ರತಿಪಾದಿಸಿದರೆ ಕನಕ ಭಿನ್ನರಾಗುತ್ತಾರೆ. ‘ಶಿವಶಿವ ಎನ್ನಿರೋ ಮೂಜಗದವರೆಲ್ಲ’, ‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನಾರಮ್ಮ’, ‘ಎನ್ನ ಕಂದ ಹಳ್ಳಿಯ ಹನುಮಾ ಚೆನ್ನಾಗಿ ಇಹರೆ ಲಕ್ಷ್ಮಣ ದೇವರು’ –ಇತ್ಯಾದಿ ಮಾತುಗಳನ್ನು ಇಲ್ಲಿ ಅನನ್ಯತೆಯ ನೆಲೆಯಲ್ಲಿಯೇ ಗ್ರಹಿಸಬಹುದು. ವೀರಶೈವ, ಬಹುಜನಸಮಾಜ ಮತ್ತು ವೈಷ್ಣವ ಪಂಥಗಳ ಅರಿವಿನ ಸಮನ್ವಯವನ್ನಿಲ್ಲಿ ಗಮನಿಸಬಹುದು. ಇದು ಎಲ್ಲಾ ಕಾಲಕ್ಕೂ ಭಾರತೀಯತೆಯ ಸಾರ್ಥಕ ಬದುಕಿಗೆ ಅತ್ಯಗತ್ಯವೂ ಹೌದು. ‘ದೇವರೊಂದು ನಾಮ ಹಲವು’ ಎಂಬ ಪ್ರಜ್ಞೆಯ ಅರಿವಿನ ಭಾಗವಿದು.
        ಆಧ್ಯಾತ್ಮ, ಪುರಾಣವನ್ನು ತಮ್ಮ ಕಾವ್ಯದೊಳಗೆ ತರುವಾಗಲೂ ಅಗತ್ಯಬಿದ್ದಲ್ಲಿ ಅದನ್ನು ವಿಮರ್ಶಿಸಿ ವ್ಯಾಖ್ಯಾನಿಸುವ ಸಾಧ್ಯತೆಯನ್ನು ಮುಕ್ತವಾಗಿರಿಸಿಕೊಂಡಿದ್ದ ಕನಕದಾಸರು,
        “ಜನನಿಯೇ ರಕ್ಷಿಪಳೆಂತೆಂಬೆನೆ ಆ ಕುಂತಿ
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ”
ಎಂದು ಧ್ವನಿಪೂರ್ಣವಾಗಿಯೇ ವಿಡಂಬಿಸುತ್ತಾರೆ.

        “ಶಿಲೆಯ ಸತಿಯಳನು ಸೌಂದರ್ಯಗೊಳಿಸಿದಪಾದ ಒಲಿದು ಪಾರ್ಥಗೆ ಧರೆಯನೊತ್ತಿದ ಪಾದ” ಎನ್ನುವಲ್ಲಿ ಕರ್ಣನ ಬಗೆಗಿನ ಸೂಕ್ಷ್ಮವಿವೇಚನೆಯೂ ನಡೆಯುತ್ತದೆ. ಇಂತಲ್ಲಿ ಕನಕರ ಸತತ ಅಧ್ಯಯನವನ್ನು, ಪುರಾಣಪ್ರಜ್ಞೆಯಲ್ಲಿ ‘ವಿಮರ್ಶನ ನೆಲೆ’ ಯನ್ನು ಗುರುತಿಸಬಹುದು. ನಾವು ಮೊದಲಲ್ಲಿ ಗಮನಿಸಿದಂತೆ ಇದು ತಳ ಸಮುದಾಯದ ಭೌತಿಕ ಸಂಸ್ಕøತಿಯ ಒಳನೋಟದ ‘ಫಲ’. ಭಕ್ತಿ, ಪ್ರತಿಭೆ, ವೈರಾಗ್ಯ, ಜೀವಪರ ಕಾಳಜಿಯ ಉತ್ಕರ್ಷಗಳೆಲ್ಲವೂ ಇದ್ದ ಕನಕದಾಸ ಈ ನೆಲದ ನಂಬಿಕೆ ಜಾತಿಪ್ರಜ್ಞೆಯಲ್ಲಿ ‘ಶೂದ್ರ’ ಎನಿಸಿಕೊಂಡ ಕಾರಣಕ್ಕೆ ದಾಸರ ಶ್ರೇಷ್ಠತೆಯ ಭ್ರಮೆಯಿಂದ ಹೊರನಿಲ್ಲುವುದಾಗುತ್ತದೆ. ಅದಕ್ಕೊಂದು ಐತಿಹ್ಯವೂ, ಕತೆಯೂ ತಳುಕುಹಾಕಿಕೊಳ್ಳುತ್ತದೆ. ಇದು ಒಂದು ವ್ಯವಸ್ಥಿತ ಸಂಚೂ ಹೌದು. ಇಂತಹ ಪರಿಸ್ಥಿತಿಯನ್ನು ‘ಕನಕ’ರು ಎದುರಿಸಿದ್ದೇ ಆಗಿದ್ದಲ್ಲಿ ಅದೊಂದು ಅರಿವಿನೊಂದಿಗಿನ ಹೋರಾಟವೇ ಆಗಿರುತ್ತದೆ. ಇದು ಕೇವಲ ಸಾಂಕೇತಿಕ ಎಂದುಕೊಳ್ಳಬಹುದಾದ ನೆಲೆಯಲ್ಲ. ಪೂರ್ಣಪ್ರಮಾಣದ ಬದ್ಧತೆಯ ಅರ್ಥವೂ ಹೌದು. ಬದ್ಧತೆ ಎನ್ನುವುದು ಇಲ್ಲಿ ನೆಲದ ಮಾತು, ಅಂದರೆ ಸತ್ಯಶೋಧದ ವಾಸ್ತವವಾದಿ ನೆಲೆಯ ಅಸ್ತಿತ್ವದ ರೂಪ. ಉಳಿದ ದಾಸರಂತೆ ‘ದಾಸತ್ವ’ ಎನ್ನುವುದು ಪ್ರವೃತ್ತಿಯಲ್ಲ, ತ್ಯಾಗವೆನ್ನುವುದು ಕೇವಲ ಆಡಂಬರವಲ್ಲ, ಜ್ಞಾನ ಮತ್ತು ಜಾತಿ ಎನ್ನುವುದು ಅಹಂಕಾರವಲ್ಲ ಎನ್ನುವ ಅರಿವಿನಿಂದಲೇ ಕನಕದಾಸರ ಹೋರಾಟವನ್ನು, ಅಸ್ತಿತ್ವವನ್ನು ಅನನ್ಯತೆಯ ಅರ್ಥದಿಂದಲೇ ಗುರುತಿಸಬೇಕಿದೆ. ಹಾಗಾಗಿ ಅವರಿಗೆ ಆ ಹೊತ್ತಿಗೆ ಬದುಕೇ ರಣರಂಗವಾಗಿರಲಿಕ್ಕೂ ಸಾಧ್ಯ. ಬಹುಶಃ ಮೂಲತಃ ದಂಡನಾಯಕ ನಾಗಿದ್ದನೆನ್ನುವ ಹಿನ್ನೆಲೆಯೇ ಇಲ್ಲಿ ಹೋರಾಟದ ಛಲಕ್ಕೂ ಕಾರಣವಾಗಿದ್ದೀತು.
        “ನೀ ಮಾಯೆಯೋ ನಿನ್ನೊಳು ಮಾಯೆಯೋ
ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೇ”

      ಇದು ಕನಕದಾಸರ ಅರಿವಿನ ಮೂಲ. ಹಾಗಾಗಿಯೇ ವ್ಯಕ್ತಿ-ವ್ಯಕ್ತಿತ್ವ, ಬದುಕು ಎನ್ನುವುದೆಲ್ಲಕ್ಕೂ ವಾಸ್ತವತಾವಾದಿಯಾಗಿ, ಸಮಾಜವಿಜ್ಞಾನಿಯಾಗಿ ಸತ್ಯವನ್ನು ಅರ್ಥೈಸುವುದು ಸಾಧ್ಯವಾಯ್ತು.

         “ಕುಲಕುಲ ಕುಲವೆನ್ನು ತಿಹರು
ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ”
“ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲಪೇಳಿರಯ್ಯ”

        ಈ ಪ್ರಶ್ನೆಗಳಿಗೆ ಸುಲಭಕ್ಕೆ ಉತ್ತರ ಕೊಡುವುದು ಸನಾತನ ನಂಬಿಕೆಗಳಿಗೆ ಸಾಧ್ಯವಲ್ಲ, ಸರಳವೂ ಅಲ್ಲ ಪ್ರಶ್ನೆಯೊಳಗೆ ಉತ್ತರ ತನ್ಮೂಲಕ ಪ್ರತಿಭಟನೆಗಳೆರಡೂ ಇವೆ. ಪ್ರಶ್ನೆಗಳನ್ನು ಅರಗಿಸಿಕೊಂಡ ವ್ಯವಸ್ಥೆಗೆ ಉತ್ತರಗೊತ್ತಿದ್ದರೂ ಕೊಡುವುದಿಲ್ಲ. ಆದರೆ ಕನಕದಾಸರು ನಿಜವಾಗಿ ‘ಮಣ್ಣಿನ ಮಗ’ ಸಾವಿನ ಅರಿವಿನಿಂದ ಎದ್ದು ಬಂದ ಬದುಕು. ಹಾಗಾಗಿಯೇ ಈ ಪ್ರಶ್ನೆಗಳೊಂದಿಗೆ ನೇರವಾಗಿಯೇ ಪರಂಪರೆಗೆ, ಮನುಷ್ಯಜಾತಿಗೆ, ವ್ಯವಸ್ಥಿತವಾದ ವರ್ಣದ ಸಂಚಿಗೆ ಎದುರಾಗುತ್ತಾರೆ. ಇಂದಿಗೂ ಅದಕ್ಕೆ ಉತ್ತರ ಸಿಕ್ಕಿಲ್ಲ. ಅಂದು ಬುದ್ಧ, ಬಸವ, ಕನಕ ಇಂದು, ಅಂಬೇಡ್ಕರ್, ಕುವೆಂಪು ಅವರ ಪ್ರಶ್ನೆಗಳೆಲ್ಲಾ ಹೀಗೆ ಪುನರ್ ಧ್ವನಿಗೊಳ್ಳುತ್ತಿವೆ. ದಿಕ್ಕು ತಪ್ಪಿಸುವ ಹುನ್ನಾರಗಳೇ ಎಲ್ಲರ ಉತ್ತರಗಳಾಗಿವೆ...
        ಕುಲಕುಲವೆಂದು ಹೊಡೆದಾಡುವ ಜನರಾರು ಇಂದಿಗೂ ತಮ್ಮ ಕುಲದನೆಲೆಯನ್ನೇನೂ ಬಲ್ಲವರಾಗಿಲ್ಲ.... ಮೂಲದ ಹುಡುಕಾಟ ಸುಲಭವಲ್ಲ. ಸಾಧ್ಯವಾದರೂ ಅರಗಿಸಿಕೊಳ್ಳುವಲ್ಲಿ ಸಮಸ್ಯೆಗಳಿರುತ್ತವೆ. “ಜಲವೆ ಸಕಲ ಕುಲಕ್ಕೆ ತಾಯಲ್ಲವೆ ಜಲದ ಕುಲವನೇನಾದರೂ ಬಲ್ಲಿರಾ” ಎಂಬ ಮಾತಿಗೆ ಯಾವ ತರ್ಕವಿರಲು ಸಾಧ್ಯ? ಇಲ್ಲಿ ಕನಕದಾಸರೊಳಗಿರುವ ವಾಸ್ತವದ ನೆಲೆಯ ವಿಜ್ಞಾನಿಯನ್ನು ಗಮನಿಸಬೇಕು. ಹಾಗೆಯೇ “ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎಂಬ ಅರಿವಿನ ಹಿಂದೆ ಇರುವ ಆರ್ಥಿಕ ತಜ್ಞನನ್ನು ಗುರುತಿಸಬೇಕು. “ಡೊಂಕುಬಾಲದ ನಾಯಕರೇ ನೀವೇನೂಟವ ಮಾಡಿದಿರಿ” ಎಂಬಲ್ಲಿ ರಾಜಕೀಯ ವಿಶ್ಲೇಷಕನಿದ್ದಾನೆ. ಹಾಗೆಯೇ “ಮಾನಹೀನವಾಗಿ ಬಾಳ್ವ ಮನುಜನೇತಕೆ?” ಎಂಬಲ್ಲಿ ಪ್ರಾಣಿಗಿಂತ ಮನುಷ್ಯ ಭಿನ್ನ ಹೇಗೆ ಎಂಬ ಅವಲೋಕನವಿದೆ. ಇಂದಿಗೂ ಇವೆಲ್ಲಾ ಮತ್ತೆ ಮತ್ತೆ, ಹತ್ತು-ಹಲವು ಉದಾಹರಣೆಗಳೊಂದಿಗೆ ನಮ್ಮ ಸಮಾಜವನ್ನೇ, ಬದುಕನ್ನೇ ಬೆರಳು ಮಾಡಿದ ಮಾತುಗಳು ಎನಿಸುವಾಗ ಕನಕದಾಸರು ದಾರ್ಶನಿಕರಾಗಿ ಸಮಕಾಲೀನರಾಗುತ್ತಾರೆನ್ನುವುದು ಗಮನಾರ್ಹ. ಇಂದಿಗೆ ಧರ್ಮ-ರಾಜಕಾರಣಗಳ ಅಪವಿತ್ರ ಮೈತ್ರಿಯಲ್ಲಿ ಬದುಕಿನ ಸಾಚಾತನವೇ ಕಳೆದುಹೋಗಿರುವ ದುರಂತಗಳಲ್ಲಿ ಕನಕದಾಸರು ತಮ್ಮ ವೈಚಾರಿಕ ಪ್ರಜ್ಞೆ ಮತ್ತು ವಿಡಂಬನೆಗಳೊಂದಿಗೆ ನಮ್ಮನ್ನು ಕಾಡುತ್ತಾರೆ. ದಾಸಪಂಥದ ಒಳಗಿದ್ದೇ “ವೇದಶಾಸ್ತ್ರ ಪುರಾಣವೆಂತೆಂಬ ಶ್ವಾನಗಳು” ಎನ್ನುವ ಎದೆಗಾರಿಕೆಯಿಂದ ಆಪ್ತವಾಗುತ್ತಾರೆ. “ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ, ನಿತ್ಯಜ್ಞಾನಿಯಾದ ಮೇಲೆ ಚಿಂತೆಯಾತಕೆ” ಇದು ಅರಿವಿನ ಉತ್ಕರ್ಷ. ಅರಿವಿನೊಂದಿಗೆ ವೈಚಾರಿಕತೆಯೂ ಮೇಳೈಸಿಕೊಂಡದ್ದರಿಂದ ಕನಕದಾಸರು ಮಹಾಕಾವ್ಯದಲ್ಲಿನ ಭಗವಂತನ ಹೆಸರಿನಲ್ಲಿ, ರೂಪದಲ್ಲಿ ನಡೆದ ಸಂಗತಿಗಳನ್ನು ವಿವೇಚನೆ ಮಾಡುತ್ತಾರೆ, ಪ್ರಶ್ನಿಸುತ್ತಾರೆ.
        “ಆರು ಬದುಕಿದರಯ್ಯ ಹರಿನಿನ್ನನಂಬಿ
ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ”

        ಈ ಬಗೆಯ ಮಾತುಗಳಲ್ಲಿರುವ ವಿಡಂಬನೆಯ ಮೊನಚನ್ನು ಗಮನಿಸಬೇಕು. ‘ಕೀರ್ತನೆ’ಗಳ ಅರ್ಥವೇ ಭಗವಂತನನ್ನು ಹೊಗಳುವುದು, ಪೂಜಿಸುವುದು, ಅವನ ಪವಾಡಗಳನ್ನು ಕುರಿತು ಗುಣಾತ್ಮಕವಾಗಿ ಮಾತನಾಡುವುದು ಇತ್ಯಾದಿ. ಆದರೆ ಕನಕದಾಸನಲ್ಲಿರುವ ಕವಿಮನಸ್ಸು ತಕ್ಷಣಕ್ಕೆ ಎಲ್ಲವನ್ನು ಪರಿಶೀಲನೆಗೆ ಹಚ್ಚಬಯಸುತ್ತದೆ. ವೈಚಾರಿಕ ಚಿಂತನೆ ಎಲ್ಲದರಲ್ಲೂ ಖಚಿತತೆಯನ್ನು ಹುಡುಕಬಯಸುತ್ತದೆ....
         ಅತೀ ಪ್ರಸಿದ್ಧವಾದ ಕನಕದಾಸರ ಕೀರ್ತನೆ “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ” ಎನ್ನುವುದು ಅವರೊಂದಿಗಿನ ಐತಿಹ್ಯವೊಂದಕ್ಕೆ ತಳುಕುಹಾಕಿಕೊಂಡಿದೆ. ಜಾತಿಭ್ರಮೆಯ ಮಠದ ಮನಸ್ಸುಗಳು ಕನಕನಂತಹ ಜ್ಞಾನಿಯನ್ನು, ಸಂತನನ್ನು, ದಾರ್ಶನಿಕನನ್ನು ತಮ್ಮ ದಾಸಪಂಥದ ಹೊರಗಿರಿಸಿ ನೋಡಿದ ಅವೈಜ್ಞಾನಿಕವೂ ಅಮಾನವೀಯವೂ ಆದ ಘಟನೆಯಾಗಿಯೇ ಹೇಳಲ್ಪಟ್ಟಿದೆ. ಭಗವಂತನೇ ಸ್ವತಃ ಕನಕನಿಗೆ ದರ್ಶನ ನೀಡಿದನೆಂಬ ಕಥಾನಕವೂ ಕನಕದಾಸನ ವ್ಯಕ್ತಿತ್ವಕ್ಕೆ, ಅವನ ಬದ್ಧತೆಗೆ, ನಿಷ್ಠುರತೆಗೆ ದೊರಕಿದ ಜಯವೂ ಹೌದು. ಇತರ ಜಾತಿ ಶ್ರೇಷ್ಠರಿಗೆ ಲಭ್ಯವಾಗದ ಸಾರ್ಥಕತೆ ಕನಕನಿಗೆ ದಕ್ಕಿತೆಂಬ ನಂಬಿಕೆಯೇ ವಿಶಿಷ್ಟವಾದುದು. ಬಹುಜನ ಸಮುದಾಯ ಹೀಗೊಂದು ಜಾತಿ, ವರ್ಣಪ್ರಜ್ಞೆಯನ್ನು ವಿರೋಧಿಸುವ, ಮಾನವೀಯ ಕಳಕಳಿಗೆ ಬೆಲೆ ನೀಡುವ ಬದ್ಧತೆಯನ್ನಿಲ್ಲಿ ಪ್ರಕಟಿಸಿದೆ ಎನ್ನಬಹುದು. ಹಾಗಾಗಿಯೇ ಈಚಿನ ದಿನಗಳಲ್ಲಿ ನಡೆದ ‘ಕನಕ ಗೋಪುರ’ದ ವಿವಾದಕ್ಕೆ ತಳಸಮುದಾಯ ಸಿಡಿದೆದ್ದದ್ದು, ಆತ್ಮಾಭಿಮಾನದ ಪ್ರತಿಮೆಯಾಗಿ ಭಾವಿಸಿದ್ದು ಸಾಕ್ಷಿಯಾಗಿದೆ. ಕನಕದಾಸನನ್ನು ಈ ನಾಡಿನ ತಳಸಮುದಾಯವೆಲ್ಲಾ ಪ್ರೀತಿಸುವ, ಗೌರವಿಸುವ ಅಭಿಮಾನವಾದರೂ ಬಹುಜನರ ಬದುಕಿನ ಆಶಾವಾದದ ಅರ್ಥವೇ ಆಗುತ್ತದೆ.
        ನಾವು ನಮ್ಮೊಳಗೆ ಹೀಗೆ ಬಹುಜನರ ನಡುವಿನಿಂದ ತಮ್ಮ ಬದ್ಧತೆಗಾಗಿಯೇ ದೊಡ್ಡವರಾದವರನ್ನು, ‘ಕುಲ’ ಮೀರುವ ಮಾತನಾಡುವವರನ್ನು, ಅದನ್ನು ಮೀರಿದಂತೆಯೇ ಗ್ರಹಿಸಬೇಕು, ಒಪ್ಪಿ ಗೌರವಿಸುವುದಾಗಬೇಕು ಅವರು ಎಲ್ಲರವರಾಗುವಂತೆಯೇ ಶ್ರೀಸಾಮಾನ್ಯನೂ ಅವರೊಳಗೆ ತನ್ನನ್ನು ಗುರುತಿಸಿಕೊಳ್ಳುವ ಆದರ್ಶಕ್ಕೆ ಒಡ್ಡಿಕೊಳ್ಳಬೇಕು. ಬದಲಾವಣೆಯ ಆಶಯಗಳು ಪರಂಪರೆಯಾಗುವುದು ಎಂಬ ಅರ್ಥವೆಂದರೇ ಇದೇ....
         ಕನಕದಾಸರ ಚಿಂತನೆಯ ಅತ್ಯುತ್ತಮ ಫಲಿತ ‘ರಾಮಧಾನ್ಯಚರಿತೆ’. ಕವಿ ಈ ಬಗೆಯ ಕಥಾನಕವನ್ನು ಚರಿತೆ ಮಾಡಬಯಸುವಲ್ಲಿಯೇ ಅವರ ದೂರದೃಷ್ಟಿಯನ್ನು ಗಮನಿಸಬೇಕು. ಅಂದರೆ ಇದು ಕಲ್ಪಿತದ, ಮಿತಿಯ ಪುರಾಣವಾಗಬೇಕಿಲ್ಲ. ಆದ್ದರಿಂದಲೇ ಜಾತಿಸೂತಕದ ಭ್ರಮೆಯ ನೂರಾರು ಜನರ, ಗಾಢ ವ್ಯವಸ್ಥೆಯ ನಡುವೆಯೇ ದಿಟ್ಟವಾಗಿ ಸಾಮಾಜಿಕ ನ್ಯಾಯದ ಹಂಬಲ ಕಥಾನಕವಾಗುವುದು ಸಾಧ್ಯವಾಗುತ್ತದೆ. ಅಂದು ತಾನೇ ಪ್ರತಿಪಾದಿಸಿಕೊಂಡ ವ್ಯಕ್ತಿಸ್ವಾತಂತ್ರ್ಯದ ಅನನ್ಯತೆ ಗಮನಾರ್ಹವಾದುದು. ಸೃಜನಶೀಲ ಕಾವ್ಯಪರಂಪರೆಯ ಉತ್ಕರ್ಷದಂತೆಯೂ ಕಾಣುವ ಈ ಕಥಾನಕದಲ್ಲಿ ಆದಿಮ ಕಾವ್ಯವಾದ ರಾಮಾಯಣ, ಪುರುಷೋತ್ತಮನಾದ ರಾಮನ ಜೊತೆಗೆ ಜಾತಿ-ವರ್ಗದ ಚರ್ಚೆಯನ್ನು ಎತ್ತುವುದು, ಸಮಾನತೆ, ಸ್ವಾತಂತ್ರ್ಯವನ್ನು ಪ್ರತಿಪಾದಿಸುವುದು ಅದ್ಭುತವಾದ ಪರಿಕಲ್ಪನೆ. ಈ ಹೊತ್ತಿಗೂ ರಾಮನನ್ನು, ರಾಮಾಯಣವನ್ನು ಒಂದು ತಂತ್ರವಾಗಿ ವರ್ಣದ ಹುನ್ನಾರವಾಗಿಯೂ ಬಳಸುವ ಸನಾತನ ಮನಸ್ಸುಗಳು ಜೀವಂತವಾಗಿರುವಾಗ ಅಂದಿಗೇ ಕನಕರ ಈ ಬಗೆಯ ಪ್ರಯೋಗ ಅತ್ಯಂತ ಉನ್ನತ ಯಶಸ್ಸಿನ ರೂಪವೇ ಆಗುತ್ತದೆ.
        ಇಡೀ ಕೃತಿಯಲ್ಲಿ ರಾಮಾಯಣದ ಕತೆ ಪುಟ್ಟದಾಗಿದೆ. ಈ ದೇಶದ ಯಾವ ಭಾಷೆಯಲ್ಲಿಯೂ ಇಷ್ಟು ಪುಟ್ಟದಾಗಿ ಹೇಳಲ್ಪಟ್ಟ ರಾಮಾಯಣ ಬಹುಶಃ ಇರಲಿಕ್ಕಿಲ್ಲ. ಕನಕದಾಸರ ಉದ್ದೇಶ-ಗುರಿಯೇ ಬೇರೆಯಾಗಿದೆ. ಅದು ‘ಧಾನ್ಯ’ಗಳ ಮೂಲದಿಂದಲೇ ವರ್ಣ-ವರ್ಗದ ಪಾತ್ರಗಳಲ್ಲಿ ರಾಮನ ಸಮಕ್ಷಮದಲ್ಲಿ ಸಾಮಾಜಿಕ ನ್ಯಾಯ ಕುರಿತ ಚರ್ಚೆಯಾಗುವುದಾಗಿದೆ. ಅಂದರೆ ಶ್ರೇಷ್ಠತೆಯ ಅಹಂಕಾರವನ್ನು ಒಡೆಯುವ ತನ್ನದೇ ಬದುಕಿನ ಕತೆಯ ಸಾಂಕೇತಿಕ ರೂಪವೂ ಈ ಕಥಾನಕದ ಆಂತರ್ಯವಾಗಿದೆ. ಬಾಲ್ಯದಲ್ಲಿಯೇ ಎಲ್ಲೆಲ್ಲೂ ದೇವರನ್ನು ಕಂಡವನೆನ್ನುವ ಕಥೆ ಹರೆಯದಲ್ಲಿ ದೇವರನ್ನೇ ಕರೆದು ದರ್ಶನ ಮಾಡಿದವರೆವಿಗೂ ಪರಂಪರೆಯಾಗಿ ಗ್ರಹಿಸಲ್ಪಟ್ಟಿದೆ. ಹಾಗಾಗಿಯೇ ಮನುಷ್ಯನಿಗಿರುವ ಸಮಾನತೆಯ ಹಕ್ಕನ್ನು, ಸತ್ಯವನ್ನು, ಚರಿತ್ರೆಯಾಗಿಯೂ ಹುಡುಕಿದ ‘ದಾರ್ಶನಿಕ’ನಂತೆ ಕನಕದಾಸ ಕಾಣುತ್ತಾನೆ.
        ಒಟ್ಟಾರೆಯಾಗಿ ಕನಕದಾಸ ಎಂಬ ವ್ಯಕ್ತಿತ್ವ ನಮ್ಮದೇ ಕಣ್ಣೊಳಗಿನ ಚರಿತ್ರೆ ಎನ್ನಬಹುದು. ಆತ ಬದುಕ ಬಯಸಿದ್ದು ಮಹಾ ಮಾನವತಾವಾದಿಯಾಗಿ, ಆ ದಿಕ್ಕಿನ ಚಲನೆಯೇ ನಮಗಿರುವ ಪ್ರಧಾನಮಾದರಿ. ಕೇವಲ ಜಯಂತಿ, ಹಾರ, ಪೂಜೆ, ಗುಣಗಾನಗಳಲ್ಲಿ ಅವನನ್ನು ಕಳೆದುಬಿಡಬಾರದು. ಮಹಾಪುರುಷರನ್ನೇ ದೇವರನ್ನಾಗಿಸುವ ಪ್ರಯತ್ನಗಳು ನಮ್ಮ ಸಮಾಜದ ಒಂದು ಹುನ್ನಾರವೂ ಆಗಿಬಿಡಬಹುದು. ಮನುಷ್ಯ ದೇವರಾದರೆ ಪುರಾಣವಾಗಿಬಿಡುವ ಅಪಾಯವಿದೆ. ಕನಕನಂತಹ ಬದ್ಧತೆಯ ಅಪರೂಪದ ಮಾನವತಾವಾದಿಗಳು, ದಾರ್ಶನಿಕರು ಪುರಾಣವಾಗಬಾರದು, ಕತೆಯಾಗಬಾರದು, ಎಚ್ಚರವಾಗಬೇಕು, ಶಕ್ತಿಯಾಗಬೇಕು. ನಮ್ಮೊಳಗೆ ಸಮಾನತೆಯಾಗಿ, ಸರ್ವೋದಯವಾಗಿ ಸಮಾಜದ ಹರಿಕಾರತ್ವವಾಗಿ ಬೆಳೆಯಬೇಕು. ಈ ಹಿನ್ನೆಲೆಯಿಂದಲೇ ನಮಗೆ ನಿರಂತರ ಎಚ್ಚರವಾಗಿ ಆತ್ಮಾವಲೋಕನವಾಗಬೇಕು. ನಿತ್ಯ ಜೀವಂತಿಕೆಯಿಂದ ಜೊತೆಸಾಗುವ ನಮ್ಮ ಶಕ್ತಿಯಾಗಿ, ಗೆಳೆಯನಾಗಬೇಕು.... ಕನಕ....

ಆ ಭಾವ... ಆ ಬದುಕು...

  ಭೀಷ್ಮಾಚಾರ್ಯ  [ವಿಪರ್ಯಾಸದ ಪಿತಾಮಹ]

         ಬದುಕು ಎನ್ನುವ ವ್ಯಾಪ್ತಿಗೆ ಹತ್ತು-ಹಲವು ಅರ್ಥಗಳಿವೆ. ಅದರಲ್ಲಿ ಬಹಳ ಮುಖ್ಯವಾದುದು `ತ್ಯಾಗ’ ಎನ್ನುವ ಭಾವ. ಈ ತ್ಯಾಗದ ಅರ್ಥಕ್ಕೆ ಸಂವಾದಿ, ಅನ್ವರ್ಥ ಎನ್ನುವಂತೆ ತನ್ನ ಇಡೀ ಬದುಕನ್ನು ರೂಪಿಸಿಕೊಂಡು ತನ್ನಂತೆ ತಾನೊಬ್ಬನೇ ಎನ್ನುವ ಪಾತ್ರವೊಂದು ಭೀಷ್ಮನ ಹೆಸರಿನಿಂದ ಮಹಾಭಾರತದಲ್ಲಿ ಜೀವ ತಳೆಯುತ್ತದೆ.
        ಭೀಷ್ಮ ಎನ್ನುವ ಪಾತ್ರವೇ ಒಂದು ಜೀವನ ಕ್ರಮ, ಮಾದರಿ, ಆದರ್ಶ ಎಂದೆಲ್ಲಾ ಗ್ರಹಿಸುವಂತೆಯೇ ಬೆಳೆಯುತ್ತಾ, ಆ ಕಾರಣದಿಂದಲೇ ‘ಆಚಾರ್ಯ’ ಎನ್ನುವ ಅಭಿಧಾನಕ್ಕೆ ಸಲ್ಲುವುದಾಗುತ್ತದೆ.
        ಮಹಾಭಾರತ ಮತ್ತೇನೋ ಆಗಬಹುದಿದ್ದ ಸಾಧ್ಯತೆಯ ದಿಕ್ಕು ತಪ್ಪಿಸಿದ ಪಾತ್ರವಾಗುವ ಭೀಷ್ಮ, ಕುರುಕ್ಷೇತ್ರವೆಂಬ ಮಹಾಸಂಗ್ರಾಮದ ಕಲ್ಪನೆಯಿಂದಲೇ ಆಚೆ ನಿಲ್ಲಿಸಬಹುದಾದ ಶಕ್ತಿಯಿದ್ದವನು, ಆದರೆ ಅದಕ್ಕಿಂತ ದೊಡ್ಡದಾದ ತುರ್ತನ್ನು ಕರ್ತವ್ಯದ ಹೆಸರಿನಿಂದಲೇ ಎದುರಾಗಿ, ಅದನ್ನು ನಿಭಾಯಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ, ತನ್ನ ಬದುಕನ್ನೇ ಮೇಣ ಮಾಡಿಕೊಂಡು ನಿರಂತರವಾಗಿ ಉರಿಯುತ್ತಲೇ ಮತ್ತಿತರರ ಬಾಳಿಗೆ ಬೆಳಕು ನೀಡುವ ತಹತಹಿಕೆಯಲ್ಲಿ ಕರಗಿಹೋದ ಪಾತ್ರ ಭೀಷ್ಮನದು.
ತನ್ನ ವ್ಯಕ್ತಿತ್ವದ ಕಾರಣದಿಂದಲೇ ದೈವಸಮಾನವಾದ ಭಾವ-ನಿಯಮಗಳನ್ನು ಹೊಂದಿದವನಾಗಿ ದೇವವ್ರತನೆಂಬ ಅಭಿಧಾನಕ್ಕೆ ಪಾತ್ರನಾಗುವ ಭೀಷ್ಮ ಗಂಗಾಸುತ, ಶಂತನು ಚಕ್ರವರ್ತಿಯ ಮಗ, ಎಂಬೆಲ್ಲಾ ಹಿರಿಮೆಗಳಿಂದಾಚೆಗೂ ವ್ಯಕ್ತಿಗತ ಶ್ರೇಷ್ಠತೆಯ ಕಾರಣದಿಂದಲೇ ಅತ್ಯುನ್ನತಿಯ ಪದವಿಯನ್ನು ಹೊಂದುತ್ತಾನೆ.
        ಯಾವುದೂ ತನ್ನದಲ್ಲ, ತನಗಲ್ಲ ಎನ್ನುವ ನಿರ್ಲಿಪ್ತತೆಯ ನಡುವೆಯೂ ಅದು ತನ್ನವರೆಂದ ಇತರರಿಗಾಗಿ ಉಳಿಯಬೇಕು, ಬೆಳೆಯಬೇಕು, ಅದು ಶ್ರೇಷ್ಠವಾಗಬೇಕು, ಕೀರ್ತಿಯಾಗಬೇಕು, ಸಾರ್ಥಕವೇ ಆಗಬೇಕು ಎಂಬೆಲ್ಲಾ ಸಮಷ್ಟಿ ಚಿಂತನೆಯ ಉತ್ಕರ್ಷದ ನೆಲೆಯಿಂದಲೂ ಭೀಷ್ಮ ಕಳೆದುಕೊಳ್ಳುತ್ತಾ, ಮತ್ತೆ ಮತ್ತೆ ನೋಯುತ್ತಾ, ಚಿರಂಜೀವಿಯಾಗುವ ಸಾಧ್ಯತೆಯಿಂದಲೇ ತಪ್ಪಿಸಿಕೊಂಡು ಸಾವಿನೆಡೆಗೆ ಸಾಗುತ್ತಾನೆ.
        ಪರಶುರಾಮನ ಶಿಷ್ಯನಾಗಿ, ಮಹಾರಥಿಯಾಗುವ ಭೀಷ್ಮನಿಗೆ ಇಚ್ಛಾಮರಣಿಯಾಗುವ ವರ, ಅಂದರೆ ಚಿರಂಜೀವತ್ವದ ಇನ್ನೊಂದು ಪರ್ಯಾಯ ತಾಯಿಯಿಂದ ಸಂದಿರುವುದಾದರೂ, ಹಕ್ಕುಬದ್ಧ ಸಿಂಹಾಸನದಿಂದ ವಂಚಿತನಾಗುತ್ತಾನೆ. ಅದರ ವಿಪರ್ಯಾಸವಾದರೂ ಮಗನನ್ನು ಅಪಾರ ಪ್ರೀತಿಸುವ ತಂದೆಯಿಂದಲೇ ಘಟಿಸುತ್ತದೆನ್ನುವುದು ಮತ್ತೊಂದು ವಿಡಂಬನೆ....
        ವಯಸ್ಸಿಗೆ ಬಂದ ವೀರ-ಧೀರನಾದ, ಪಟ್ಟಕ್ಕೆ ಯೋಗ್ಯನಾಗಿಯೂ ಸಲ್ಲಬಹುದಾಗಿದ್ದ ಮಗನಿಗೆ ಸಿಂಹಾಸನವನ್ನು ವಹಿಸಿ, ಮದುವೆ ನಡೆಸಿ ತಾನು ಸಂತೃಪ್ತಿಯಿಂದ ನೋಡಿ ಬದುಕಬಹುದಾದ ಕಾಲದಲ್ಲೇ ಅಪ್ಪ ಶಂತನುಮಹಾರಾಜ ಸತ್ಯವತಿಯನ್ನು ಮೋಹಿಸುತ್ತಾನೆ. ರಾಜತ್ವದ ಅಹಂಕಾರದ ಮೋಹ ಮದುವೆಯ ಅನಿವಾರ್ಯತೆಯನ್ನು ಅವನ ಮುಂದಿಡುವಾಗ ಅದರಿಂದ ಪಾರಾಗಲಾರದ ಮಿತಿಯಲ್ಲೇ ರಾಜ ತೊಳಲುತ್ತಾನೆ. ಅಪ್ಪನ ವಯಸ್ಸನ್ನು ಮೀರಿದ ವಾಂಛಲ್ಯದ ತೊಳಲಾಟಗಳು ಮಗನ ಬದುಕಿನ ನಾಳಿನ ದಿನಗಳಲ್ಲಿ ಮುಳ್ಳಾಗುವ ಕ್ರಿಯೆಯಾಗುವುದು, ಭೀಷ್ಮನನ್ನು ಮೀರಿದ ಮಹಾಭಾರತದ ಚಲನೆಗೆ ಕಾರಣವಾಗಿಬಿಡುತ್ತದೆ.
        ಶಂತನುವಿನ ಮದುವೆ ವ್ಯಕ್ತಿನಿಷ್ಠನೆಲೆಯದ್ದಾಗುವಂತಿಲ್ಲ, ಅದು ಅವನನ್ನು ದಾಟಿ ಇಡೀ ರಾಜತ್ವದ ವಾರಸುದಾರಿಕೆಯನ್ನೇ ಕೇಳುವಾಗ ಶಂತನು ಒಬ್ಬ ಪರಿಪೂರ್ಣ ರಾಜನಾಗಿ ಉಳಿದು ತನ್ನತನವನ್ನು ಕಾಯ್ದುಕೊಳ್ಳಬಹುದಿತ್ತು. ಅದಾಗಲಿಲ್ಲ ಅವನೊಳಗಿನ ವ್ಯಾಮೋಹವೇ ಮುಖ್ಯವಾಗಿಬಿಡುತ್ತದೆ. ದೇವಗಂಗೆಯನ್ನೇ ಹೊಂದಿ ಸುಖಪಟ್ಟವನು ಬೆಸ್ತರಕನ್ಯೆಯ ಸೌಂದರ್ಯದಿಂದ ಪಾರಾಗುವುದಾಗುವುದಿಲ್ಲ, ಮನ್ಮಥನೇ ವಿಜೃಂಭಿಸುತ್ತಾನೆ.
        ಅಪ್ಪ, ಮಗನಿಗೆ ಮಾಡಬೇಕಿದ್ದ ಕರ್ತವ್ಯವನ್ನು ಮಗ ಅಪ್ಪನಿಗಾಗಿ ನೆರವೇರಿಸಲು ಬದ್ಧನಾಗುತ್ತಾನೆ. ತಂದೆಯ ವಿವಾಹ ಮಾಡುವುದು ಅವನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಆ ವಿವಾಹ ಕೇವಲ ಗಂಡು-ಹೆಣ್ಣಿನ ಪರಸ್ಪರ ಎನ್ನುವ ಸಂಬಂಧದ ಮಿತಿಗೆ ನಿಲ್ಲುವಂತಿರಲಿಲ್ಲ, ಸಕಾಲಿಕವಲ್ಲದ ಕಾರಣವೂ ಇದ್ದೀತು. ಈ ಮದುವೆ ನೇರವಾಗಿ ಭೀಷ್ಮನ ಭವಿಷ್ಯವನ್ನೇ ಬಲಿ ಕೇಳುವುದಾಗುತ್ತದೆ. ಭೀಷ್ಮನಾದರೂ ಮತ್ತೆ ಅಪ್ಪನಿಗಾಗಿಯೇ ಯುವರಾಜತ್ವದ ಕರ್ತವ್ಯದಿಂದ ವಿಮುಖನಾಗಿಬಿಡುತ್ತಾನೆ. ಅದರಿಂದಾಗಬಹುದಾದ ಯಾವ ಅನಾಹುತದ ಕಲ್ಪನೆಯೂ ಬಹುಶಃ ಅವನಿಗೆ ದೊಡ್ಡದಾಗುವುದಿಲ್ಲ ವೃದ್ಧನಾದ ಅಪ್ಪನ ಆಸೆಗೆ ತಾರುಣ್ಯದ ಮಗನ ಆಸೆಗಳೇ ಬಲಿಯಾಗುವುದಾಗುತ್ತದೆ.
        ತಂದೆಯನ್ನು ಉಳಿಸಿಕೊಳ್ಳುವಲ್ಲಿಯೇ ತನ್ನ ರಾಜ್ಯದ ಹಿತಕಾಯುವ ಉದ್ದೇಶವಿದ್ದಂತೆ ಆಲೋಚಿಸುವ ಭೀಷ್ಮ `ತ್ಯಾಗದ’ ಮೊದಲ ಹೆಜ್ಜೆಯೊಂದಿಗೆ ನಾಳಿನ ದಿನಗಳಲ್ಲಿ ಕುರುಕ್ಷೇತ್ರ ಮಹಾಸಂಗ್ರಾಮಕ್ಕೆ ರಹದಾರಿ ತೆರೆದು ಬಿಡುತ್ತಾನೆನ್ನಬಹುದು.
        ತಮ್ಮ ತಪ್ಪಲ್ಲದ ಕಾರಣದಿಂದಲೂ ಜೀವನವನ್ನೇ ತಪಸ್ಸುಮಾಡಿ ಕೊಳ್ಳಬೇಕಾದ ಪಾತ್ರಪರಂಪರೆಗಳನ್ನೇ ಮಹಾಭಾರತ ಸೃಷ್ಟಿಸುತ್ತದೆ. ಆದರಲ್ಲಿ ಭೀಷ್ಮನ ಪಾತ್ರವೇ ಮೊದಲ ಸಾಲಿನಲ್ಲಿ ನಿಲ್ಲುವಂತಹುದು.
        ತಂದೆ ಅಥವಾ ಮಹಾರಾಜ ಕರ್ತವ್ಯದಿಂದ ವಿಮುಖನಾಗುವ ಹೆಜ್ಜೆಗಳಲ್ಲೇ ಮಗನ ಜವಾಬ್ದಾರಿಗಳು ಹೆಚ್ಚಾಗುತ್ತವೆ. ತಪ್ಪಿಸಿಕೊಂಡಷ್ಟು ಮತ್ತೆ ಮತ್ತೆ ತಾನೇ ಇಡೀ ಭಾರತದ ಪರಂಪರೆಗೆ ಹೆಗಲು ಕೊಡುವ, ಹಾಗೇ ಹೊಣೆಗಾರಿಕೆಯ ಕಾರಣಕ್ಕೆ ದುರಂತಗಳನ್ನು ತಪ್ಪಿಸಲಾಗದೇ ಒದ್ದಾಡುವ ಅನಿವಾರ್ತೆಗಳಿಗೂ ಭೀಷ್ಮ ಒಳಗಾಗುತ್ತಾನೆ.
        ಅಂದು ತಾನು ತಂದೆಯ ಪರವಾದÀ ತ್ಯಾಗಕ್ಕೆ ನಿಲ್ಲುವ ಹೊತ್ತಿಗೆ, ಬ್ರಹ್ಮಚಾರಿಯಾಗುವ ಪ್ರತಿಜ್ಞೆ ನಾಳಿನ ದಿನಗಳಲ್ಲಿ ಒಂದಷ್ಟು ವಿಲೋಮವನ್ನು, ದುರಂತದ ಪರಂಪರೆಯನ್ನು ಸೃಷ್ಟಿಸಬಹುದು ಎನ್ನುವ ಅರಿವಿದ್ದು ಭೀಷ್ಮ ಬಂಧನಕ್ಕೆ ಒಳಗಾಗುತ್ತಾನೆ. ಅವನೇ ಕಳಚಿಕೊಂಡ ನಾಳೆಗಳು ಅವನಿಂದ ಮತ್ತೆ ಎಷ್ಟೇ ಒತ್ತಡಗಳನ್ನು ಸೃಷ್ಟಿಸಿದರೂ ಒಳಗೊಳ್ಳಲಾಗದ ಪ್ರತಿಜ್ಞೆಯ ಸಂವಾದಿಯಾಗಿಯೇ ಭೀಷ್ಮನೆಂಬ ಅನ್ವರ್ಥವೂ ಉಳಿಯುವಂತಾಗುತ್ತದೆ.
        ಪ್ರತಿಜ್ಞೆಗಳ ಹೆಸರಿನಿಂದ ತಾನು ಎಲ್ಲದರಿಂದಲೂ ತಪ್ಪಿಸಿಕೊಂಡನೆ? ಎನ್ನುವುದಕ್ಕೆ ಭವಿಷ್ಯದಲ್ಲಿ ನೇತ್ಯಾತ್ಮಕವಾದ ಉತ್ತರಗಳೇ ಕಾದಿರುತ್ತವೆ. ಅವನು ಬಿಟ್ಟರೂ ಅವನನ್ನು ರಾಜಕಾರ್ಯಬಿಡುವಂತಿಲ್ಲ. ತನ್ನ ವಂಶದ ಹಿರಿಮೆ, ಶ್ರೇಷ್ಠತೆಗಳು ಕಾಯಲೇಬೇಕೆಂಬ ಭೀಷ್ಮನ ವಂಶ ಪ್ರೀತಿಯೂ ಅವನನ್ನು ರಾಜಕಾರಣದಿಂದ ತಪ್ಪಿಸಿಕೊಳ್ಳಲಾಗದಂತೆ ಪ್ರವಾಹಕ್ಕೆ ಸೆಳೆದುಬಿಡುತ್ತದೆ.
       ಅಪ್ಪನಿಗಾಗಿ ಅವನು ಮೆಚ್ಚಿದವನನ್ನು ತಂದು ಮದುವೆ ಮಾಡಿದ ಮಗ ಮುಂದೆ ಮತ್ತದೇ ಪರಂಪರೆಯ ಕೊಂಡಿಯನ್ನೇ ಹಿಡಿಯಬೇಕಾಗಿದೆ. ಸತ್ಯವತಿಯ ಮಗ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಲು ಕಾಶೀರಾಜನ ಮಕ್ಕಳನ್ನು ಹೊತ್ತುತರುವಲ್ಲಿಯೂ ಭೀಷ್ಮನೇ ಮುಂದಾಗಬೇಕಿದೆ. ಹೀಗೆ ರಾಜಕುಮಾರಿಯರನ್ನು ಸ್ವಯಂವರದಿಂದಲೂ ಹೊತ್ತುತರುವ ಕಾಯಕ ದಿಂದಲೇ ಭೀಷ್ಮ ಮಹಾಭಾರತದ ವ್ಯಾಪಕತೆಯ ಅನಿವಾರ್ಯವಾಗಿ ಬಿಡುತ್ತಾನೆ.
       ಈ ಪ್ರಸಂಗದ ಸರಿ-ತಪ್ಪುಗಳ ವಿವೇಚನೆಯಾಚೆಗೆ ವೀರತ್ವವನ್ನು, ಕ್ಷತ್ರಿಯತ್ವವನ್ನು ಮುಂದುಮಾಡಿಕೊಂಡೇ ತನ್ನನ್ನು ಸಮರ್ಥಿಸಿಕೊಳ್ಳುವ ಭೀಷ್ಮ, ತನ್ನ ಆ ಬಗೆಯ ನಿಲುವುಗಳಿಂದಲೇ ಅಂಬೆಯ ಶಾಪಕ್ಕೂ, ತನ್ಮೂಲಕ ಮನೋವ್ಯಾಕುಲಕ್ಕು ತುತ್ತಾಗಲೇಬೇಕು. ಮುಂದೆ ಇದು ಕರ್ಮಸಿದ್ಧಾಂತದಂತೆ ಭೀಷ್ಮನನ್ನು ಕಾಡಿಯೇ ತೀರುವುದಾಗುತ್ತದೆ. ಆತ್ಮಾವಲೋಕನದ ಅವಶ್ಯಕತೆಗಳು ಇದ್ದಲ್ಲೆಲ್ಲಾ ಬಹುಶಃ ಭೀಷ್ಮನ ಆತಂಕಗಳಿರುವುದು ಅಂಬೆಯ ಶಾಪದ ಅಂತರಾಳದಲ್ಲಿ ಎನ್ನುವುದನ್ನು ಗ್ರಹಿಸಲೇಬೇಕು. ಸಹಜ ಪ್ರಕ್ರಿಯೆಗಳನ್ನು ಮೀರುವುದರಿಂದ ಆಗಬಹುದಾದ ಅನಾಹುತಗಳನ್ನು ಇದು ಪ್ರತಿನಿಧಿಸಿದಂತಿದೆ.
        ತನ್ನ ವಂಶದ ಸಾಮ್ರಾಜ್ಯದ ಒಳಿತಿಗೆಂದೇ ಪ್ರಯತ್ನಿಸುವ ಅವನ ಶ್ರಮಗಳಾವುವೂ ವಿಚಿತ್ರವೀರ್ಯನನ್ನು ಸಾವಿನಿಂದ ಪಾರುಮಾಡುವುದಾಗಲಿಲ್ಲ, ಅದರೊಂದಿಗೆ ಅವನನ್ನು ಚಂದ್ರವಂಶದ ನಿರಂತರತೆಯಾಗುವಲ್ಲಿ ಉಳಿಸಲಾಗುವುದಿಲ್ಲ. ಪದೇ ಪದೇ ಅವನ ಪ್ರತಿಜ್ಞೆಯ ಕಾರಣವೇ ಸಾಮ್ರಾಜ್ಯಶಾಹಿಗೆ ಹೊಸ ಅರ್ಥವನ್ನು ವಂಶದ ವಾರಸುದಾರಿಕೆಗೆ ವಿಚಿತ್ರವಾದ ಪರಿಸ್ಥಿತಿಯನ್ನು ನಿರ್ಮಾಣಮಾಡುವಂತಾಗುತ್ತದೆ.
        ಸಾಮಾಜಿಕ ಬದುಕಿನ, ಶ್ರೀಸಾಮಾನ್ಯನೊಬ್ಬನ ಬದುಕಿಗೆ ಯೋಚಿಸಲಾಗದ, ನೈತಿಕತೆಯ ಪ್ರಶ್ನೆಯಾಗುವ ಸಂಗತಿ ಇಲ್ಲಿ ಘಟಿಸುತ್ತದೆ. ಸತ್ಯವತಿಯ ಮೊದಲ ಮಗ, ವ್ಯಾಸನಿಂದ ವಂಶೋದ್ಧಾರದ ಕೆಲಸ ಅನಿವಾರ್ಯವೆನ್ನುವಂತೆ, ಶಾಸ್ತ್ರನೀತಿಯ ಸಮರ್ಥನೆಯೋಪಾದಿಯಲ್ಲಿ ಘಟಿಸುತ್ತದೆ. ಶಂತನು ಮಹಾರಾಜನ ಮೋಹ ಉಂಟುಮಾಡಿದ ಒಂದು ಘಟನೆ ಮುಂದಕ್ಕೆ ಒಂದು ಕ್ರಮ ಮೀರಿದ ಪರಂಪರೆಗೆ ನಾಂದಿಹಾಡಿದಂತೆ, ವಿಚಿತ್ರವಾದ ಹೊಸಮಾರ್ಗವನ್ನೇ ಉಂಟುಮಾಡಲು ಯತ್ನಿಸುತ್ತದೆ. ಇಂತಲ್ಲೆಲ್ಲಾ ಭೀಷ್ಮ ಅಸಹಾಯಕನಂತೆ, ಮೂಕಪ್ರೇಕ್ಷಕನಂತೆ ನಿರ್ಲಿಪ್ತವಾಗ ಬೇಕಾದ ವಿಪರ್ಯಾಸ ಘಟಿಸುತ್ತದೆ.
ಕಾಲದೊಂದಿಗೆ ಮಾಗುತ್ತಾ ಸಾಗುವ ಭೀಷ್ಮನ ಬದುಕಾದರೂ ವಿಶ್ರಾಂತ ಎನ್ನುವ ನಿರಾಳತೆಗಿಂತ ಭಿನ್ನವಾಗಿದೆ. ಪಾಂಡವ-ಕೌರವತನಗಳಿಂದಾಚೆಗೆ ಭೀಷ್ಮನ ವ್ಯಕ್ತಿತ್ವ ಹೊಸ ಬದ್ಧತೆಗಳಿಗೆ ಚಾಚಲೇಬೇಕಾದ ಅನಿವಾರ್ಯತೆಯನ್ನು ಮಹಾಭಾರತವೇ ಒಡ್ಡುತ್ತದೆ. ಅವನು, ಅಥವಾ ಅವನಂತಹ ಸಹೃದಯ ಮನಸ್ಸಿನ ಹಿರಿಯ-ಕಿರಿಯರಾದಿಯಾಗಿ ಯಾರೂ ನಿರೀಕ್ಷಿಸದ, ಬಯಸದ ಘಟನೆಗಳು ನಡೆಯುವಾಗ ಮೂಕ ಸಾಕ್ಷಿಗಳಾಗಿಯೇ ಉಳಿಯುವಂತಾಗುತ್ತದೆ.
        ತನ್ನ ಗುಣ-ವ್ಯಕ್ತಿತ್ವದ ಕಾರಣದಿಂದಲೇ ಇಚ್ಛಾಮರಣಿಯಾಗ ಬಹುದಾದ ವರಪಡೆದ ಭೀಷ್ಮನಿಗೆ ಅದು ಶಾಪದಂತೆಯೂ ಆಗಿರಬಹುದಾದ ಸಾಧ್ಯತೆಯನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಸ್ವಯಂ ಸೃಷ್ಟಿಸಿಕೊಂಡ ಅನಿವಾರ್ಯತೆ ಒಂದೆಡೆ, ವಂಶದ ಬಗೆಗಿನ ಅಭಿಮಾನ ಮತ್ತೊಂದೆಡೆ, ಇವುಗಳ ಜೊತೆಗೆ ತನ್ನ ನಂತರದ ಕಿರಿಯ ತಲೆಮಾರುಗಳೆಲ್ಲಾ ತನ್ನ ಕಣ್ಣೆದುರೇ ಸಾವಿನಕಡೆಗೆ ಮುಖಮಾಡುವಾಗ ಅಸಹಾಯಕನಾಗಿ ಉಳಿಯುತ್ತಾ ಭೀಷ್ಮ ಮತ್ತಷ್ಟು ಹಣ್ಣಾಗುತ್ತಾನೆ.
        ತಾನು ಬದುಕಿರುವಾಗಲೇ ತನ್ನೆದುರಿಗೆ ತನ್ನ ವಂಶ ನಾಶವಾಗುವುದನ್ನು ಆತ ಸಹಿಸುವುದು ಸಾಧ್ಯವಿಲ್ಲ. ಹಾಗೆಯೇ ತನ್ನ ಜೀವಿತಾವಧಿಯಲ್ಲೇ ಒಂದು ಭದ್ರ ಬುನಾದಿಯನ್ನು ವಂಶಕ್ಕೆ ಒದಗಿಸುವ ಆಸೆ, ಈ ಎರಡೂ ಆಲೋಚನೆಗಳು ಅವನನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.
        ಹೀಗೆ ತನ್ನ ವಂಶದ ಪ್ರತಿಷ್ಠೆ ಕುರಿತ ಆಲೋಚನೆಗಳೇ ಅವನನ್ನು ಗಂಭೀರವಾಗಿ ಕಾಡುವುದಾದರೂ ಪಾಂಡವ-ಕೌರವರ ಕಲಹದಿಂದಾಗಿ ಅವು ಭಿನ್ನದಿಕ್ಕಿಗೆ ಮುಖಮಾಡುತ್ತವೆ.
        ಪಾಂಡುವನ್ನು ಕಳೆದುಕೊಂಡು ಕುಂತಿಯ ಆಶ್ರಯದಲ್ಲಿ ಬೆಳೆಯುವ ಐದು ಮಕ್ಕಳು, ತಂದೆಯ ಮಾರ್ಗದರ್ಶನವಿಲ್ಲದೆ ನರಳುವುದು ಒಂದೆಡೆಯಾದರೆ, ಅಂಧನಾದ ಧೃತರಾಷ್ಟ್ರ ಪುತ್ರ ವ್ಯಾಮೋಹದಲ್ಲಿ ಮಕ್ಕಳನ್ನು ನಿಯಂತ್ರಿಸಲಾರದೆ ಅಸಹಾಯಕನಾಗುವುದು ಮತ್ತೊಂದೆಡೆ. ಎರಡರ ಹೊಣೆಗಾರಿಕೆಗಳೂ ಮತ್ತೆ ಭೀಷ್ಮನನ್ನೇ ಬೆರಳುಮಾಡುತ್ತವೆ. ಪರಸ್ಪರ ಪೂರಕವಾಗಿ ಸಮಾಧಾನ ಹುಟ್ಟಿಸಬೇಕಾದ ಸಂಬಂಧಗಳು ಸಂಘರ್ಷವನ್ನೇ ಅನಿವಾರ್ಯವಾಗಿಸಿಕೊಂಡಾಗ ಭೀಷ್ಮನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಮಕ್ಕಳ ವಾತ್ಸಲ್ಯದ ಮುಗ್ಧತೆಯ ಭಾವವನ್ನು ನೋಡುತ್ತಾ, ಅನುಭವಿಸುತ್ತಾ ಅರಳಬಹುದಾಗಿದ್ದ ಭೀಷ್ಮ, ನರಳುವಂತಾಗುತ್ತದೆ. ಬಾಲ್ಯದ ಅವರ ನಡವಳಿಕೆ ಮತ್ತು ಬೆಳವಣಿಗೆಗಳು ನಾಳೆಗಳನ್ನು ನಿರ್ದೇಶಿಸುತ್ತವೆ.  ಭೀಷ್ಮನ ಭಾರ ಮತ್ತಷ್ಟು ಹೆಚ್ಚಾಗುತ್ತದೆ.
        ಯಾವುದೇ ವ್ಯವಸ್ಥೆಯನ್ನು, ಸಂದರ್ಭವನ್ನು ಇಡಿಯಾಗಿ ಒಬ್ಬನೇ ನಿಯಂತ್ರಿಸಬಹುದಾದಷ್ಟು ಶಕ್ತಿ, ಚಾತುರ್ಯ, ಬುದ್ಧಿಮತ್ತೆ ಇರುವ ಭೀಷ್ಮ ತನ್ನಮನೆಯ ಮಕ್ಕಳನ್ನೇ ನಿಯಂತ್ರಿಸದಂತಾಗುವುದು ಅವನ ವ್ಯಕ್ತಿತ್ವದೊಳಗಿನ ವಿಪರ್ಯಾಸವಾಗಿದೆ. ಪಾಂಡವರನ್ನು ಒಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ಭೀಷ್ಮನಿಗೆ ದುರ್ಯೋಧನ ಮಾತ್ರ ದೊಡ್ಡ ಸವಾಲೇ ಆಗುತ್ತಾನೆ. ದುರ್ಯೋಧನನೆನ್ನುವುದೇ ಇಡೀ ಕೌರವರು ಎಂದಾದದ್ದು ಮತ್ತಷ್ಟು ಸಂಕಷ್ಟವೇ ಸರಿ. ಹಿರಿಯನಾದ ಭೀಷ್ಮನಂತೆಯೇ ಅವರ ವಿದ್ಯಾಗುರುಗಳಾದ ದ್ರೋಣ, ಕೃಪ ಮೊದಲಾದವರು ಸಹ ಈ ನಿಟ್ಟಿನಲ್ಲಿ ಅಸಹಾಯಕರೇ ಆಗಿಬಿಡುತ್ತಾರೆ.
         ತನ್ನ ತಾರುಣ್ಯದ ಉತ್ಸಾಹ, ಭಾವುಕತೆ, ತ್ಯಾಗದ, ಮೋಹದ ನೆಲೆಯಲ್ಲಿ ಅಂದು ಮಾಡಿದ ಪ್ರತಿಜ್ಞೆಯ ಲಾಲಿತ್ಯವೆ ಇಂದು ಆತ ಕೌರವರ ಬಗೆಗೆ ತಾಳುವ ನಿಲುವಾಗಿ ಅದು ಆ ಕಾರಣಕ್ಕೆ ಭೀಷ್ಮನ ಮಿತಿಯೂ ಆಗಿ ಕಾಣಿಸುತ್ತದೆ. ಇಲ್ಲಿಯೇ ಅವನು ತಾಳಬಹುದಾಗಿದ್ದ ಒಂದು ದೃಢವಾದ ನಿಲುವು ಮತ್ತು ಅಷ್ಟೇ ಖಡಾಖಂಡಿತವಾದ ನಿರ್ಧಾರಗಳು ಧೃತರಾಷ್ಟ್ರನನ್ನು, ಅವನ ಮಕ್ಕಳನ್ನು ನಿಯಂತ್ರಿಸಲು ಕಾರಣವಾಗಬಹುದಿತ್ತು ಎಂದು ತಕ್ಷಣಕ್ಕೆ ಅನಿಸಬಹುದಾದರೂ, ನಿರಾಕರಿಸಿದ ರಾಜ್ಯದ ಸಂಗತಿಯಲ್ಲಿ ಹಾಗೆ ಸ್ವಾತಂತ್ರ್ಯ ತೆಗೆದುಕೊಳ್ಳುವ ಪ್ರಯತ್ನಕ್ಕೆ ಆತ ಖಂಡಿತಾ ಮುಂದಾಗುವಂತಿರಲಿಲ್ಲ. ಅವನು ತನ್ನನ್ನು ತಾನೆ ಸಲಹೆ, ಪ್ರೀತಿ, ಕಳಕಳಿ ಎಂಬೆಲ್ಲಾ ಮಿತಿಗೆ ಒಳಪಡಿಸಿ ಕೊಂಡಂತೆನಿಸಿಬಿಡುತ್ತದೆ.
        ಭೀಷ್ಮನ ಸಹೃದಯತೆಯ ಈ ಮೃದುಧೋರಣೆಗಳು ಕೂಡ ಇತರರ ಮನಸ್ಸನ್ನು ಕಲಕುವುದಕ್ಕಾಗಲೀ, ಒಡೆಯುವುದಕ್ಕಾಗಲಿ ಅವಕಾಶ ನೀಡಲಿಲ್ಲ ವೆನ್ನಬಹುದು. ಭೀಷ್ಮನಾದರೂ ತುಂಬಾಸಲ ಬಹಳ ಆಶಾವಾದಿಯಾಗಿಯೇ ಕಂಡು ಬರುತ್ತಾನೆ. ಅವುಗಳೆಲ್ಲದರ ಫಲಿತವೆಂಬಂತೆ ಅವನು ಶರಮಂಚ ದವರೆವಿಗೆ ಸಾಗುವುದಾಗುತ್ತದೆ.
        ತನ್ನ ಕಣ್ಣೆದುರಿನಲ್ಲೇ, ಅರಿವಿನ ಜೊತೆಯಲ್ಲೇ ದುರ್ಯೋಧನ ಪಾಂಡವರ ವಿರುದ್ಧ ನಡೆಸುವ ಪ್ರತೀ ಸಂಚುಗಳ ಸಂದರ್ಭದಲ್ಲಿಯೂ ತೀರಾ ಅಸಹಾಯಕನಾಗಿ ಉಳಿಯಬೇಕಾಗುವ ಅವನ ಪರಿಸ್ಥಿತಿ ಸಂದರ್ಭದ ಒಂದು ದೊಡ್ಡವ್ಯಂಗ್ಯವೇ ಸರಿ. ಮುಪ್ಪಿನ ಕಾಲದ ಕಾರಣಕ್ಕಾಗಿ ಅವನನ್ನು ಆವರಿಸಿ ಕೊಳ್ಳುವುದಕ್ಕಿಂತ ಮಾನಸಿಕ ಹೊಡೆತಕ್ಕೆ ಆತ ಬಹಳಷ್ಟು ಜರ್ಝರಿತ ನಾಗುತ್ತಾನೆ. ಅದರಲ್ಲೂ ಮಹಾಭಾರತದ ಅತ್ಯುಗ್ರ ಶೋಷಣೆಯ, ಅನ್ಯಾಯದ ಪರಮಾವಧಿ ಎಂದುಕೊಳ್ಳಬಹುದಾದ ದ್ರೌಪದಿಯ ವಸ್ತ್ರಾಪಹರಣದ ಘಟನೆ ಭೀಷ್ಮನ ಮಾನಸಿಕ ನೆಮ್ಮದಿಯ ವಿನಾಶದ ಉತ್ಕರ್ಷವೇ ಆಗಿದ್ದೀತು. ತನ್ನ ಮನೆಯ ಕುಲಸ್ತ್ರೀಯನ್ನು ತನ್ನದೇ ಮನೆಯವನೊಬ್ಬ, ತುಂಬಿದ ಸಭೆಯಲ್ಲಿ ಇಷ್ಟೊಂದು ಅನಾಗರಿಕವಾಗಿ ಅವಮಾನ ಮಾಡುವುದನ್ನು ನೋಡಿಕೊಂಡೂ ಸುಮ್ಮನಿರಲೇಬೇಕಾದ ಪ್ರಸಂಗವನ್ನು ಭೀಷ್ಮನ ಇರುವಿಕೆಯಲ್ಲಿ ಕಲ್ಪಿಸುವುದಂತೂ ಕಡುಕಷ್ಟವೇ ಹೌದು.
        ಭೀಷ್ಮನಿಗೂ ಈ ಬಗೆಯ ಅಸಹಾಯಕತೆ ಉಂಟಾಯಿತೆಂದರೆ ಅವನ ಬಗೆಗಿನ ಅತ್ಯುನ್ನತಿಯ ಕಲ್ಪನೆಯನ್ನು ಒಪ್ಪಿಕೊಳ್ಳುವುದು ತುಸು ಕಷ್ಟ. ಬಹುಶಃ ಆ ಹೊತ್ತಿಗೆ ದ್ರೌಪದಿಗಾದರೂ ಭೀಷ್ಮನನ್ನು ಕುರಿತಂತೆ ನೂರುಪಟ್ಟು ನಿರಾಶೆ, ಸಿಟ್ಟು, ನೋವುಗಳೆಲ್ಲಾ ಉಂಟಾಗಿದ್ದಿರಬೇಕು. ಅವಳ ಯಾವ ಧರ್ಮಪರವಾದ ಪ್ರಶ್ನೆಗಳಿಗೂ ಅವನಲ್ಲಿ ಉತ್ತರವಿರುವಂತಿಲ್ಲ. ಆ ಕ್ಷಣಕ್ಕೆ ಭೀಷ್ಮನಿಗೆ ತನ್ನ ಬದುಕಿನ ಪ್ರತಿಜ್ಞೆ ತಂದೆ-ತಾಯಿ, ಆ ಕುರಿತ ಎಲ್ಲ ಬಗೆಯ ಅವಘಡಗಳು ಇತ್ಯಾದಿಗಳೆಲ್ಲವೂ ಮತ್ತಷ್ಟು ಕಾಡಿ-ಕಲಕಿ, ಅವನನ್ನು ಹಣ್ಣುಮಾಡಿದ್ದಿರಬಹುದು. ಹೀಗೆ ಇಂತಹ ಒಂದು ಘೋರ ಘಟನೆಗೆ ಸಾಕ್ಷಿಯಾದರು ಎನ್ನುವ ಕಾರಣದಿಂದಲೂ ಕುರುಕ್ಷೇತ್ರ ಅವರನ್ನೆಲ್ಲಾ ಬಲಿಬೇಡಿತ್ತೇನೋ?
        ತನ್ನ ಹಿರಿಯರು ಕಟ್ಟಿ ಕಾಪಾಡಿಕೊಂಡ ಸಾಮ್ರಾಜ್ಯ ವಂಶ ಪಾರಂಪರ್ಯವಾಗಿ ನಿರಂತರವಾಗಿ ಶ್ರೇಷ್ಠತೆಗಳ ಮಾದರಿಯಾಗಿಯೇ ಇರಬೇಕೆಂದು ಗಂಗಾಸುತ ಆಸೆಪಟ್ಟಿದ್ದ. ಅದೇ ವಂಶದ ಅವನ ಕಿರಿಯ ತಲೆಮಾರು ರಾಜ್ಯದಾಹದಿಂದ, ವೈಯಕ್ತಿಕ ಪ್ರತಿಷ್ಠೆಯ ಅಹಂಕಾರಗಳಿಂದ ಪರಸ್ಪರರು ಬಂಧುತ್ವವನ್ನು ಮೀರಿ ಶತ್ರುಗಳೇ ಆಗಿ, ಕುರುಕ್ಷೇತ್ರದಂತಹ ಮಹಾನಾಶದ ಮಹಾಸಂಗ್ರಾಮದೆಡೆಗೆ ದಾಪುಗಾಲಿಟ್ಟರು, ಭೀಷ್ಮನ ಬದುಕಿನ ದೊಡ್ಡವ್ಯಂಗ್ಯ ಮತ್ತು ದುರಂತ ಇಲ್ಲಿ ಕಾಣಸಿಗುತ್ತದೆ. ಇಲ್ಲಿಯೂ ಸರ್ವಸಮ್ಮತವಾದಂತೆ, ಮನಃಪೂರ್ವಕ ತೀರ್ಮಾನಕ್ಕೆ ಬದ್ಧನಾಗಲು ಅವನಿಂದ ಸಾಧ್ಯವಾಗುವುದಿಲ್ಲ.
ತಾನೇ ಮುದ್ದಾಡಿ, ಸಾಕಿ ಬೆಳೆಸಿದ ತನ್ನ ಮಕ್ಕಳ ವಿರುದ್ಧವೇ ಯುದ್ಧದ ನಾಯಕತ್ವ ವಹಿಸಬೇಕಾಗುತ್ತದೆ. ಒಂದೆಡೆಗೆ ಅನ್ನದ ಋಣವೆಂಬ ವಿಚಿತ್ರ ಬದ್ಧತೆ, ಮತ್ತೊಂದೆಡೆಗೆ ಪಾಂಡವರ ಬಗೆಗಿನ ನ್ಯಾಯ ಪರವಾದ ಪ್ರೀತಿ ಈ ಎರಡು ದ್ವಂದ್ವಗಳ ನಡುವೆ ಯಾರಿಗೂ ಒದಗಬಹುದಾದ ರೀತಿಯಲ್ಲಿ ವರ್ತಿಸುವುದು ಭೀಷ್ಮಾಚಾರ್ಯನಿಗೆ ಸಾಧ್ಯವೇ ಆಗುವುದಿಲ್ಲ.
        ಹದಿನೆಂಟು ದಿನಗಳ ಮಹಾಯುದ್ಧ, ಹತ್ತುದಿನಗಳ ಕಾಲ ದಂಡನಾಯಕನಾಗಿ ಯುದ್ಧ, ಶತ್ರುಪಾಳಯದಲ್ಲಿ ಅಂದರೆ ಪಾಂಡವರ ಸೈನ್ಯದಲ್ಲಿ ದಿನಕ್ಕೆ ಹತ್ತು ಸಾವಿರದಂತೆ ವೀರ ಯೋಧರನ್ನು ಬಲಿತೆಗೆದುಕೊಳ್ಳುವ ಅಸಹಾಯ ಶೂರತ್ವ ಪ್ರಕಟಿಸಿದಾಗ್ಯೂ ಅದು ದುರ್ಯೋಧನನಿಗೆ ಮಹತ್ವದ ಸಂಭ್ರಮವನ್ನು ತಂದುಕೊಡಲಿಲ್ಲ, ಗೆಲುವನ್ನು ಸೂಚಿಸುವುದಾಗುವುದಿಲ್ಲ. ಪಾಂಡವರೈವರಲ್ಲಿ ಯಾರೊಬ್ಬರನ್ನಾದರೂ ಕೊಲ್ಲಲಾಗದ ಭೀಷ್ಮರ ಶೌರ್ಯವನ್ನು ಇತರರೂ ಪ್ರಶ್ನಿಸುವಂತಾದದ್ದನ್ನು ನಿರಾಕರಿಸುವಂತಿಲ್ಲ.
        ಭೀಷ್ಮ ಪಾಂಡವರಲ್ಲಿ ಹಾಗೆ ಒಬ್ಬರನ್ನಾದರೂ ಕೊಂದಿದ್ದರೂ ಅದು ಇಡೀ ಪಾಂಡವರ ವಿರುದ್ಧದ ಗೆಲುವಾಗುತ್ತಿತ್ತು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಯುದ್ಧದ ನಿರ್ಧಾರಿತ ಹದಿನೆಂಟು ದಿನಗಳಲ್ಲಿ ಅರ್ಧಕ್ಕಿಂತ ಹೆಚ್ಚು ದಿನಗಳನ್ನು ಯುದ್ಧಕ್ಕಾಗಿ ಭೀಷ್ಮನಂತಹ ಮಹಾಯೋಧ ಆವರಿಸಿಕೊಂಡಾಗಲು ಅದು ನಿರೀಕ್ಷಿತ ಗೆಲುವಿನ ಸಮೀಪವಾಗಲಿಲ್ಲವೆನ್ನುವ ವಿಪರ್ಯಾಸದಲ್ಲಿರುವುದು ಭೀಷ್ಮನ ನ್ಯಾಯಪರವಾದ ಪ್ರೀತಿಯೂ ಆಗಿರಬಹುದೆ? ಯುದ್ಧದ ಕೊನೆಯವರೆವಿಗೂ ಅವನಿಗೆ ಇದ್ದ ಒಂದೇ ಆಸೆ, ಕೌರವ ಪಾಂಡವರನ್ನು ಒಗ್ಗೂಡಿಸಲಾದೀತೆ?  ಎನ್ನುವುದೇ ಇದ್ದೀತು.
        ಕೃಷ್ಣನ ಪ್ರಮಾಣವನ್ನೇ ಮೀರಿಸುವಂತೆ ಅವನ ಕೈನಲ್ಲಿ ಸುದರ್ಶನ ಹಿಡಿಸುವಷ್ಟು ವೀರತ್ವದಿಂದ ಯುದ್ಧಮಾಡುವ ಭೀಷ್ಮನಿಗೆ ಪಾಂಡವರಲ್ಲಿ ಯಾರೊಬ್ಬರನ್ನಾದರೂ ದುರಂತಕ್ಕೆಡೆ ಮಾಡುವುದು ಕಷ್ಟವಿತ್ತೆ? ಎನ್ನುವ ಪ್ರಶ್ನೆಗೆ ಉತ್ತರ ಸರಳವಿಲ್ಲ. ಕೌರವರ ಪರವಾಗಿ ಯುದ್ಧಮಾಡುತ್ತಲೇ ಪಾಂಡವರೈವರನ್ನು ಕಾಪಾಡಿದಂತೆ ಕಾಣುವ ಭೀಷ್ಮ ಖಂಡಿತವಾಗಿ ಕೌರವನ ದೌರ್ಜನ್ಯಗಳಿಗೆ ರೋಸಿಹೋಗಿದ್ದಾನೆ. ಇದು ಎಂದಿಗಾದರೂ ನಡೆದೇ ತೀರಬೇಕು. ಯಾರಾದರೂ ಒಬ್ಬರು, ಅಂದರೆ ಪಾಂಡವರು ಅಥವಾ ಕೌರವರು ಉಳಿಯುವುದಷ್ಟೇ ಆ ಹೊತ್ತಿನ ಅನಿವಾರ್ಯ. ಅದರಾಚೆಗೆ ಯಾವ ಪರಂಪರೆಯ ಪೋಷಣೆಯೂ ಸಾಧ್ಯವಿಲ್ಲ. ಹಾಗಿರುವಾಗ ಉಳಿಯುವುದಾದರೆ ವಂಶಕೀರ್ತಿ ಉಳಿಸುವ ಶಕ್ತಿ ಇರುವ ಪಾಂಡವರೇ ಉಳಿಯಬೇಕಾದುದು ಸೂಕ್ತ. ಅವರು ನ್ಯಾಯಪರವಾಗಿದ್ದರು ಎನ್ನುವುದರಲ್ಲಿ ಭಿನ್ನಮತವಿಲ್ಲ ಬದುಕಿನ ಮೊದಲ ದಿನಗಳಿಂದಲೂ ಕಂಡುಕೊಂಡಿರುವ ಸತ್ಯವಿದು.
        ಕೃಷ್ಣನೇ ಪಾಂಡವರ ಪರನಿಂತಾಗ ಅದರಾಚೆಗೇನೋ ಸಾಧಿಸಬಹುದಾದ ಕಲ್ಪನೆ ಸುಲಭವಿಲ್ಲ.  ಇದು ನಡೆದೇ ತೀರಬೇಕಾದುದು, ತಾನು ತಪ್ಪಿಸಲಾಗುವುದಿಲ್ಲವೆಂದಾಗುವುದೇ ನಿಜವಾದಾಗ ಬೇರಾವ ಪರಿಶ್ರಮವಿದ್ದೀತು? ತನ್ನ ಕರ್ತವ್ಯವನ್ನು, ಮುಗಿಸಿ ಸಾಗಿಬಿಡಬೇಕು ಎನ್ನುವ ಬದುಕಿನ ಬಗೆಗಿನ ನಿರಾಸಕ್ತಿಯೇ ಮೈವೆತ್ತಂತೆ ಯುದ್ಧಮಾಡುತ್ತಾನೆ. ತನ್ನ ಯುದ್ಧ ಮುಕ್ತಾಯದ ಹಾದಿಯನ್ನು ಪಾಂಡವರು ಬೇಡುವ ಹೊತ್ತಿಗೆ ಅದರ ಮಾರ್ಗೋಪಾಯವನ್ನು ಆತನೇ ಸೂಚಿಸುತ್ತಾನೆ.
        ಈ ಯುದ್ಧದ ತನ್ನ ಪಾಲಿನ ಕೊನೆಯ ಋಣದಲ್ಲಿ ಆತನಾದರೂ ಶಿಖಂಡಿಗೂ ನ್ಯಾಯ ಒದಗಿಸಬೇಕಾದ ಅನಿವಾರ್ಯತೆ ಇದೆ ಇದು ಕವಸಿರ್ಸಿದ್ಧಾಂತದ ಪರಿಯೂ ಹೌದು. ಅಂಬೆಯ ನೋವಿಗೆ, ಶಾಪಕ್ಕೆ, ಪ್ರತಿಕ್ರಿಯಿಸಲೇಬೇಕು. ಶಿಖಂಡಿಯ ನೆಪದಲ್ಲಿ ಯುದ್ಧವನ್ನು ಕೈಬಿಡುವ ಪಿತಾಮಹ ತಕ್ಷಣಕ್ಕೆ ಮುಕ್ತಿಯನ್ನು ಹೊಂದುವಂತೆಯೂ ಇಲ್ಲ. ತನ್ನಸಾವಿಗೆ ಮಕರಸಂಕ್ರಮಣವನ್ನು ಎದುರುನೋಡುವ ಅವನ ನಿಲುವನ್ನು ಒಂದು ನೆಪವಾಗಿಯೇ ಭಾವಿಸಬಹುದು. ಅವನಿಗೆ ಈ ಕುರುಕ್ಷೇತ್ರದ ಯುದ್ಧದ ಫಲಿತಾಂಶದ ಬಗೆಗೂ ಕುತೂಹಲವಿದೆ. ಆ ಬಗೆಯ ನಿರೀಕ್ಷೆಯಾದರೂ ಅವನಿಗೆ ಕರ್ತವ್ಯವೇ ಆಗಿದೆ. ತನ್ನ ವಂಶದ ಹಿರಿಮೆಯನ್ನು ಕಾಯ್ದುಕೊಳ್ಳಲು ಶಪಥ ಮಾಡಿದ್ದ ಆ ಮನಸ್ಸೇ ಇಂದಿಗೂ ತನ್ನ ಕುಲದ ಏಳ್ಗೆಗಾಗಿ ಹಂಬಲಿಸುತ್ತಿದೆ.
       ಆದರೆ ಭೀಷ್ಮಾಚಾರ್ಯನ ಸಾವಿನ ನಿರೀಕ್ಷೆಯಾದರೂ ಹೇಗೆ? ಎಲ್ಲಿ? ಎನ್ನುವುದೇ ಬದುಕಿನ ಗಂಭೀರತೆಗಳ ನೆಲೆಗಳನ್ನು ಕುರಿತು ಆತಂಕ ವ್ಯಕ್ತಪಡಿಸುವಂತಹುದು. ಅರ್ಜುನನಿಂದಲೇ ಕೇಳಿ ಸಿದ್ಧಪಡಿಸಿಕೊಂಡ ಬಾಣಗಳಿಂದ ನಿರ್ಮಿಸಲಾದ ಮಂಚದ ಮೇಲೆ ಮಲಗಿರುವ ಭೀಷ್ಮ, ಆ ನೋವನ್ನು ಅನುಭವಿಸುವ ಬಗೆಯಾದರೂ ಬಹುಶಃ ತನಗೆ ತಾನೇ ಶಿಕ್ಷಿಸಿಕೊಂಡ ಪರಿಯೇ ಎನಿಸುವುದುಂಟು. ತನ್ನ ಶಪಥದಿಂದ ಉಂಟಾದ ಕ್ರಮಲೋಪ ಈ ವಿನಾಶದವರೆಗೆ ತಂದು ನಿಲ್ಲಿಸಿರುವ ಬಗೆಗಿನ ಅವಲೋಕನದ ಪಶ್ಚಾತ್ತಾಪದಂತೆಯೇ ಈ ಪ್ರಸಂಗ ಕಾಣಿಸುತ್ತದೆ.
      ಶರಮಂಚದ ಮೇಲೆ ಮಲಗಿಯೂ ತನ್ನ ತೊಡೆ ಮೇಲಿನ ಮಕ್ಕಳನ್ನು ಆತ ನಿರ್ದೇಶಿಸುತ್ತಾನೆ.  ಪಾಂಡವರನ್ನು ರಕ್ಷಿಸಲು ಕೃಷ್ಣನೇ ಮುಂದಾಳಾಗಿರುವಾಗ ಆ ಬಗೆಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ ಕೌರವರ ಸ್ಥಿತಿ ಹಾಗಿಲ್ಲ, ಹಾಗಾಗಿ ಕೊನೇಪಕ್ಷ ಕೌರವರ ವಾರಸುದಾರನನ್ನಾಗಿ ದುರ್ಯೋಧನನನ್ನಾದರೂ ಉಳಿಸಬಹುದೇ? ಎನ್ನುವ ಹಂಬಲ. ಆದ್ದರಿಂದಲೆ ಕೊನೆಯಲ್ಲಿ ಏಕಾಂಗಿಯಾಗಿ ಬಂದು ತನ್ನ ಆಶೀರ್ವಾದ ಬೇಡುವ ಮೊಮ್ಮಗನಿಗಾಗಿ ಮಮ್ಮಲ ಮರುಗುತ್ತಾನೆ. ದುರ್ಯೋಧನನಿಂದ ಘಟಿಸಿರಬಹುದಾದ ಎಲ್ಲಾ ಅನ್ಯಾಯಗಳಾಚೆಗೂ ಆತ ಅವನ ವಂಶದ ಕುಡಿ ಎನ್ನುವುದನ್ನು ಬಾಂಧವ್ಯದ ನೆಲೆಯಲ್ಲಿ ನಿರಾಕರಿಸುವುದು ಸುಲಭಸಾಧ್ಯವೇ? ದುರ್ಯೋಧನನಿಗೆ ವೈಶಂಪಾಯನದ ಮಾರ್ಗೋಪಾಯವನ್ನು ತಾನೇ ಸೂಚಿಸುತ್ತಾನೆ. ಇಲ್ಲಿಯೂ ಭೀಷ್ಮನಿಗೆ ಕೊನೆಯದೊಂದು ದೂರದ ಆಸೆ. ಆದರೆ ದುರ್ಯೋಧನ ಛಲದಂಕಮಲ್ಲ, ಸಾವಿಗಂಜುವ ಮನುಷ್ಯನಲ್ಲ. ಅವನನ್ನು ಭೀಷ್ಮರಕ್ಷೆ ಕಾಯುವುದಾಗಲಿಲ್ಲ ಎನ್ನುವುದು ಮತ್ತೊಂದು ದುರಂತ. ಕೊನೆಗೆ ಅಂದುಕೊಂಡಂತೆ ತನ್ನ ವಂಶದ ವಾರಸುದಾರಿಕೆಗೆ ಸಮರ್ಥರಾದ ಪಾಂಡವರಿಗೆ ದೊರಕಿತೆಂಬ ತೃಪ್ತಿಯಲ್ಲೇ ಆತ ಪ್ರಾಣಬಿಡುತ್ತಾನೆ.
       ವಿಪರ್ಯಾಸಗಳೊಂದಿಗೆ ಹುಟ್ಟಿದವನೆನ್ನಬಹುದಾದ ಗಂಗಾತನಯ ಒಂದರ್ಥಕ್ಕೆ ತಂದೆ-ತಾಯಿಯರಿಬ್ಬರ ಪ್ರೀತಿಯೊಳಗಿದ್ದೂ ಅಪೂರ್ಣನೆ!. ಯೌವನದಲ್ಲಿ ಸಹಜವಾದ ವೈಯಕ್ತಿಕ ಸುಖಗಳಿಂದ ವಂಚಿತನಾದರೂ ಕ್ಷತ್ರಿಯತ್ವದ ಇಡೀ ಪರಂಪರೆಯ ಕದಲುವಿಕೆಯ ಪ್ರತೀ ಭಾವಕ್ಕೆ ಸಾಕ್ಷಿಯಾಗುತ್ತಾ, ಬದುಕಿನುದ್ದಕ್ಕೂ ನೋವನ್ನು ಅನುಭವಿಸುತ್ತಲೇ, ಸಹಿಸಿ ನಗುತ್ತಾನೆ. ಕೊನೆಯವರೆಗೂ ಪಲ್ಲಂಗದಲ್ಲಿದ್ದು ನಿದ್ರಿಸಲಾಗದೆ ಚಡಪಡಿಸುವ ಮಹಾನುಭಾವ ಭೀಷ್ಮ ಅವುಗಳೆಲ್ಲದರ ಸ್ಮೃತಿಯೆಂಬಂತೆ ಯುದ್ಧರಂಗದಲ್ಲಿ ಬಾಣಗಳ ಮೇಲೆ ಮಲಗಿ ತನ್ನ ಬದುಕನ್ನೇ ಸಂಕೇತಿಸುತ್ತಾನೆ. . . .

ಕುವೆಂಪು ಎಂಬ ದಾರ್ಶನಿಕ          ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...

Popular Posts