Friday, 11 August 2017

ಮಕ್ಕಳು ಶಿಕ್ಷಣ ನಾವು.....

        ಮಳೆಮೋಡಗಳ, ತಂಪುಗಾಳಿಯ ಪರಿಸರ, ಪ್ರಕೃತಿಯೊಳಗೆ ಎಂತದ್ದೋ ಮಧುರ ಬದಲಾವಣೆ ಚಲಿಸುವ ಮೋಡಗಳು ಅಲ್ಲಲ್ಲಿ ನಿಂತು ನಾಲ್ಕಾರು ಹನಿ ಭುವಿಗೆ ಸಿಂಪಡಿಸಿದ ಕಾಲಕ್ಕೆ ನೆಲದ ತುಂಬ ಹೊಸ ಹಸಿರಿನ ಚಿತ್ತಾರ. ಮನುಷ್ಯ ಎಷ್ಟು ಬೆಳೆದರೇನು? ನಾಗರೀಕನಾದರೇನು? ಆಧುನಿಕತೆಯ ಉತ್ಕರ್ಷ ತಲುಪಿದರೇನು? ಪ್ರಕೃತಿಯ ಕರುಣೆ, ಕನಿಕರ ಇಲ್ಲವಾದರೆ ಯಾವ ಬೆಳವಣಿಗೆಗಳಿಗೂ ಅಹಂಕಾರಗಳಿಗೂ ಅರ್ಥವಿಲ್ಲ. ಜೂನ್ ತಿಂಗಳಿಂದ ಮುಂಗಾರು ಮಳೆಯ ಕನವರಿಕೆ, ಜನಕ್ಕೆಲ್ಲ-ಜಗಕ್ಕೆಲ್ಲ ಮಳೆ ನೀರು ಜೀವರಾಶಿಯ ನಿಜ ಜೀವಸತ್ವದ ಸಂಕೇತ ಎಲ್ಲಾ ಕ್ರಿಯಾಶೀಲ ಚಟುವಟಿಕೆಗಳ ಮೂಲಾಧಾರ. ಎಲ್ಲರ ದೃಷ್ಟಿ ಗಗನದತ್ತ ಚಲಿಸುವ ಮೋಡಗಳತ್ತ “ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ” ಇದು ಎಲ್ಲರ ಒಂದು ಸಾಲಿನ ಪ್ರಾರ್ಥನೆ.

         ಈ ತಿಂಗಳ ತುಂಬಾ ಕಲರವಕ್ಕೆ ಮತ್ತೇನೇನೋ ಸಂಬಂಧಗಳಿವೆ... ಮನೆಮಕ್ಕಳು ವಾರ್ಷಿಕ ರಜೆ ಕಳೆದು ಶಾಲೆಗಳಿಗೆ ಹೊರಟಿದ್ದಾರೆ. ಕಿರಿಯಮಕ್ಕಳು ಹಿರಿಯರಾಗುವ, ಹಿರಿಯ ಮಕ್ಕಳು ಪ್ರೌಢರಾಗುವ, ಪ್ರೌಢ ಮಕ್ಕಳು ಕಾಲೇಜು ಮೆಟ್ಟಿಲೇರುವ, ಅಲ್ಲಿಂದ ಮುಂದಿನವರು ಪದವಿಗಳೆಡೆಗೆ ದಾಪುಗಾಲಿಡುವ, ಮುಂದಿನವರು ಉನ್ನತ ಶಿಕ್ಷಣದ ಕನಸಿಗೆ ದಾಟುವ ಒಂದು ವಿಶಿಷ್ಟ ಪರಿ. ಒಂದಲ್ಲ ಒಂದು ರೀತಿಯಲ್ಲಿ ಮನೆಗಳಲ್ಲಿ ಹೀಗೆ ಮಕ್ಕಳದ್ದೇ ಕಲರವ. ತಾನು ಕಲಿಯಲಿಲ್ಲ ತನ್ನ ಮಗು ಕಲಿಯಲೇಬೇಕೆಂಬ ಹಠಕ್ಕೆ ಬಿದ್ದ ಮುಗ್ಧ ಅನಕ್ಷರಸ್ಥರು, ಕಲಿತವರು ತಮ್ಮ ಮಕ್ಕಳು ತಾವು ಬಯಸಿದ್ದರೆಡೆಗೆ ನಡೆಯಬೇಕೆಂದು ಹಠಕ್ಕೆ ಬಿದ್ದವರು, ನೀನು ಬಯಸಿದ ಅರಿವಿನೆಡೆಗೆ ನಡೆ ಎಂದು ಬೆನ್ನು ತಟ್ಟುವ ನಿಜದ ಪೋಷಕರು ಹೀಗೆ ಒಳ-ಹೊರಗಿನ ತುಮುಲ, ದ್ವಂದ್ವ, ಒದ್ದಾಟಗಳು.... ಜೂನ್ ತಿಂಗಳು ತನ್ನೊಡಲು ತುಂಬ ಹೀಗೆ ಕಪ್ಪು-ಬಿಳುಪು ಬಣ್ಣಗಳ ತುಂಬಿಕೊಂಡು ಮತ್ತಷ್ಟು ಗಾಢವೇ ಆಗಿದೆ. ಅದರೊಂದಿಗೆ ಮಳೆ-ಗಾಳಿ-ಚಳಿಯ ವಿಶಿಷ್ಟವಾದ ಸಮ್ಮಿಲವೂ ತಾನೇ ಹಾಸು-ಹೊಕ್ಕಾದಂತಿದೆ.

        ವಿದ್ಯೆ-ಜ್ಞಾನವನ್ನು ತಮ್ಮ ಹಕ್ಕು ಎಂದುಕೊಂಡಿದ್ದ ವ್ಯವಸ್ಥಿತವಾದ ಯೋಚನೆ, ಯೋಜನೆಗಳನ್ನು ಮುರಿದು ಎಲ್ಲರಿಗೂ ಅರಿವು-ಜ್ಞಾನ ಎಂದು ಬಂಧನದಿಂದ ಹೊರಗೆ ಬಂದದ್ದೇ ಈ ನೆಲದ ಬಹುದೊಡ್ಡ ಕ್ರಾಂತಿ. ಅದಕ್ಕೆ ಹತ್ತು ಹಲವು ನೆರವುಗಳಿವೆ. ವಿಭಿನ್ನ ಆಯಾಮಗಳಿವೆ ಇಂದಿಗೆ ಶಿಕ್ಷಣ ಹಕ್ಕಾಗಿದೆ, ಎಚ್ಚರವಾಗಿದೆ, ಕರ್ತವ್ಯವಾಗಿದೆ. ಕಣ್ಣೊಳಗೇ ಇದ್ದ ಕತ್ತಲಿಗೆ ಈಗ ಬೆಳಕು ಬಂದಿದೆ ಈ ನಿಟ್ಟಿನಲ್ಲಿ ದಾಪುಗಾಲಿಡಬೇಕು. ಈ ದೇಶ ಸಂಪೂರ್ಣ ಸಾಕ್ಷರತೆಯ ನಾಡಾಗಬೇಕು, ಹಾಗೆಂದು ಬರೀ ಹೆಸರು ಬರೆದು ಸಹಿ ಹಾಕುವುದಲ್ಲ, ಅಕ್ಷರ ಜ್ಞಾನವಾಗಬೇಕು ನಿಜದ ಪದವಿಯಾಗಬೇಕು ಎಚ್ಚರ ಮೂಡಬೇಕು. ಅದು ಈ ದೇಶದ ಸಮಾನತೆಯ ಮುನ್ನುಡಿಯೂ ಆಗಬೇಕು. ಬದುಕು ದೊಡ್ಡದು ಎಂಬುದು ಕೇವಲ ಮಾತಾಗದೇ ಪ್ರಜ್ಞೆಯಾಗಬೇಕು. ಹಾಗಾಗಿಯೇ ಶಿಕ್ಷಣವನ್ನು ಪರಿಹಾರದ ಬಹಳ ಮುಖ್ಯ ಹಾದಿ ಎಂದು ಜಗತ್ತಿನ ಎಲ್ಲಾ ದಾರ್ಶನಿಕರು ಚಿಂತಕರು ಮತ್ತೆ ಮತ್ತೆ ಪ್ರತಿಪಾದಿಸಿದ್ದಾರೆ. ಇಂದು ಪ್ರತಿ ಪ್ರಜಾಸರ್ಕಾರಗಳು ಹೀಗೊಂದು ಅಕ್ಷರಕ್ರಾಂತಿಗೆ ಅನಿವಾರ್ಯವಾಗಿ ಟೊಂಕಕಟ್ಟಿ ನಿಂತಿವೆ ಇದು ಮತ್ತಷ್ಟು ಬದ್ಧತೆಯಾಗಬೇಕು, ದೇಶದ ಆದ್ಯತೆಯಾಗಬೇಕು. ಭಾರತ ದೇಶ ಅಖಂಡ ಸಾಕ್ಷರತೆಯ ದೇಶವಾಗಿ ಜಗತ್ತು ನಮ್ಮೆಡೆಗೆ ನೋಡಬೇಕು “ಗುರುದೇವೋಭವ” ಎಂದು ಗುರುವನ್ನು ಗೌರವಿಸಿದ ನೆಲ ನಮ್ಮದು ಇದು ಎದೆಯ ಮುಖ್ಯ ಧ್ವನಿಯಾಗಬೇಕು.

        ವಿದ್ಯೆ ಎಂದರೇನು ಎನ್ನುವುದೊಂದು ಬಹುದೊಡ್ಡ ತಾತ್ವಿಕ ಚರ್ಚೆ ಅಕ್ಷರ ಮೂಲದಿಂದಲೇ ವಿದ್ಯೆ ಎಂದರೆ ಕೋಟಿವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಅನುಭವವನ್ನು ಹೇಗೆ ನಿರಾಕರಿಸುವುದು. ಅಕ್ಷರ ಜ್ಞಾನ ಒಂದು ಮೂಲಮಾತ್ರ ಆದರೆ ಆಧುನಿಕ ಜಗತ್ತನ್ನು ಈ ಅಕ್ಷರ ಪ್ರತಿನಿಧಿಸುವುದನ್ನು ಅಲ್ಲಗಳೆಯುವಂತಿಲ್ಲ. ಗಿಡಮೂಲಿಕೆಗಳಿಂದ ಗಂಭೀರ ರೋಗಗಳನ್ನು ಗುಣಪಡಿಸುವ ನಾಟಿ ವೈದ್ಯರ ಜ್ಞಾನ, ಅಕ್ಷರದಿಂದ ಬಂದಿದ್ದಲ್ಲ, ಆಕಾಶ ನೋಡಿ, ಗಾಳಿಯ ವೇಗ ನೋಡಿ, ಸಮುದ್ರದ ಬಣ್ಣ ನೋಡಿ ಮಳೆಯನ್ನು ಅಳೆಯುವ  ನೆಲದ ಜ್ಞಾನಿಯಂತಿರುವ ಶ್ರೀಸಾಮಾನ್ಯರ ಅರಿವಾದರೂ ಯಾವ ಹವಾಮಾನ ತಜ್ಞರಿಗಿಂತ ಕಡಿಮೆಯಾಗಬಲ್ಲದು. ಆಧುನಿಕತೆ ಎನ್ನುವುದು ಬಹಳ ಸಲ ನಮ್ಮ ಅಹಂಕಾರವೇ ಆಗಿರುವುದರಿಂದಲೂ  ಅದೆಷ್ಟೋ ನೆಲಮೂಲದ ಪ್ರಕೃತಿ ಪ್ರಪಂಚದ ಅರಿವಿನ ಮನುಷ್ಯರನ್ನು ಕಡೆಗಣ್ಣಿನಿಂದಲೇ ನೋಡಿರುವ ಅಪಾಯಗಳು ನಮ್ಮೊಂದಿಗಿವೆ. ನಿನ್ನೆಗಳು ಮತ್ತು ಜ್ಞಾನಗಳು ಹಳೆತಿನ ಅರ್ಥಗಳಲ್ಲಿ ಎಂಬ ಎಚ್ಚರದೊಂದಿಗೆ ಹೊಸತನ್ನು ಪರಿಶೀಲಿಸಿಕೊಂಡು ಸಾಧನೆಯತ್ತ ಸಾಗುವ ತುರ್ತು ಎಂದಿಗಿಂತ ಇಂದು ಹೆಚ್ಚಾಗಿದೆ ಎನಿಸುತ್ತದೆ. ಜ್ಞಾನಶಿಸ್ತುಗಳ ಶಾಖೆ ಎಂದಿಗಿಂತಲೂ ಇಂದು ಹೆಚ್ಚಿದೆ ನಾಳೆ ಇದು ಮತ್ತಷ್ಟು ಹೆಚ್ಚಾಗಿಬಿಡಬಹುದು. ಆಧುನಿಕತೆಯ ವೇಗವೇ ಹೀಗೆ ಕೆಲವೊಮ್ಮೆ  ಅತಿ ಎನಿಸುವಷ್ಟು ಹೆಚ್ಚಿದೆ. ಇದನ್ನು ಹೇಗೆ ಭಾವಿಸಬಹುದು ಎನ್ನುವುದು ಪ್ರಶ್ನೆ. ನಮ್ಮ ಮಕ್ಕಳು ಏನಾಗಬೇಕು ಇದು ಈ ಕ್ಷಣದ ಅತೀ ದೊಡ್ಡ ಸವಾಲು ನಮ್ಮೊಂದಿಗಿದೆ. ಆರಂಭದಲ್ಲಿ ಗಮನಿಸಿದಂತೆ ನಮ್ಮ ವಾರ್ಷಿಕ ಶೈಕ್ಷಣಿಕ ಅವಧಿಯ ಮೊದಲಿಗೆ ಈ ಹೊತ್ತಿನ ಬಹುಪಾಲು ಕುಟುಂಬ ಎದುರಿಸಬಹುದಾದ ಸೂಕ್ಷ್ಮ ಸಮಸ್ಯೆಗಳಿವು. ವಿಚಿತ್ರ ಎಂದರೆ ನಮ್ಮ ಮಕ್ಕಳು ಏನಾಗಬೇಕು ಎನ್ನುವ ಚಿಂತನೆಗಳು ಈ ಪರಿಯಲ್ಲಿ ಗಂಭೀರ ಸಮಸ್ಯೆಗಳಾಗಬೇಕೆ ಎಂದು ಪ್ರಶ್ನಿಸಿದರೆ ಯಾರಾದರೂ ಇದೊಂದು ಬಾಲಿಶವಾದ ಪ್ರಶ್ನೆ ಎಂದು ಬಿಡಬಹುದು. ವೇಗದ ಜಗತ್ತು ನಮ್ಮಿಂದ ಏನೇನನ್ನೋ ನಿರೀಕ್ಷಿಸುತ್ತಿರುವಾಗ ಈ ಬಗೆಯ ನಮ್ಮ ಪೋಷಕರಿಗೊಂದು ಪ್ರಶ್ನೆಯನ್ನಂತು ಹುಟ್ಟು ಹಾಕಿ ಬಿಟ್ಟಿದೆ. ಒಂದು ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ಇದೊಂದು ಗಂಭೀರ ಸಮಸ್ಯೆ ಎನಿಸಿರಲಿಲ್ಲ. ನಾವು ಏನಾಗಬಹುದು ಎನ್ನುವುದು ಪದವಿ ಮುಗಿಸುವ ಹೊತ್ತಿಗೂ ನಮ್ಮನ್ನು ತೀರಾ ಎಂಬಂತೆ ಕಾಡಿರಲಿಲ್ಲವೆನ್ನುವುದು ಸುಳ್ಳಲ್ಲ. ಈಗಿನ ನಮ್ಮ ಈ ಹೊತ್ತಿನ ಮಕ್ಕಳು ಅದೆಷ್ಟೋ ಮುಂದಿದ್ದಾರೆ ಎನ್ನುವುದು ಅಚ್ಚರಿ ಹುಟ್ಟಿಸುವಂತಹದು. ಪ್ರೌಢಶಿಕ್ಷಣ ಮುಗಿಸುವ ಹೊತ್ತಿಗೆ ಬಹಳಷ್ಟು ವಿದ್ಯಾರ್ಥಿಗಳು ಮುಂದಿನ ನಡೆಯನ್ನು ಚಿಂತಿಸುವ ಮಟ್ಟದಲ್ಲಿದ್ದಾರೆ. ಕಿರಿಯ ಕಾಲೇಜು ಮುಗಿಸುವ ಹೊತ್ತಿಗಂತೋ ಇಡೀ ಬದುಕಿನ ಒಟ್ಟು ಹಾದಿಯನ್ನೇ ತೀರ್ಮಾನಿಸಿಕೊಂಡಂತಿದ್ದಾರೆ.... ಇದು ಸಹಜಪ್ರಕ್ರಿಯೆಯೇ ಎಂಬ ಆತಂಕ ಹುಟ್ಟಿಸುವಷ್ಟು ವೇಗವಾಗಿದೆ ಅವರ ಚಿಂತನೆ. ಇದು ಆಧುನಿಕತೆಯ ಫಲವೇ? ಎಂದರೆ ಬಹುಪಾಲು ಸತ್ಯದ ಸಂಗತಿ, ಇದರಲ್ಲಿ ತಕರಾರಿಲ್ಲ. ಈ ಧಾವಂತದ ತೀವ್ರತೆ ಎಷ್ಟಿದೆಯೆಂದರೆ ಮಗ/ಮಗಳು ಎಸ್.ಎಸ್.ಎಲ್.ಸಿ ತರಗತಿ ಪ್ರವೇಶ ಪಡೆದ ದಿನದಿಂದ ಪೋಷಕರ ಒತ್ತಡ ಆರಂಭವಾದರೆ ಅದು ಅವರ ಉನ್ನತ ಶಿಕ್ಷಣ ಮುಗಿದು, ಒಂದು ಕೆಲಸ ಎನ್ನುವುದನ್ನು ದಕ್ಕಿಸಿಕೊಳ್ಳುವವರೆಗೆ ಮುಗಿಯುವಂತಿಲ್ಲ. ಹಾಗೆಂದು ಅದಾದ ನಂತರವಾದರೂ ನಿರಾಳತೆಯಿದೆಯೇ? ಸಾಧ್ಯವಿಲ್ಲ ಅಲ್ಲಿನವರೆಗಿನ ಒತ್ತಡವೇ ದೇಹ-ಮನಸ್ಸು-ಭಾವಗಳನ್ನೆಲ್ಲಾ ಶಿಥಿಲಗೊಳಿಸಿ ಅಕಾಲವೃದ್ಧಾಪ್ಯಕ್ಕೀಡು ಮಾಡುತ್ತಿದೆ. ಎದ್ದು ಕಾಣುವ ತೀವ್ರ ಸಮಸ್ಯೆ ಎಂದು ಬಹಳ ಜನಕ್ಕೆ ಇದು ಈ ಕ್ಷಣಕ್ಕೆ ಅನ್ನಿಸುತ್ತಿಲ್ಲ ಎನ್ನುವುದೇ ವಿಪರ್ಯಾಸ ಮತ್ತು ದುರಂತ ಹಾಗಾದರೆ ಅದರ ಮೂಲ ಎಲ್ಲಿದೆ? ಉತ್ತರ ಸುಲಭವಿಲ್ಲ.

        ಈಚೆಗೆ ಹಿರಿಯರು ಪುಟ್ಟ ಮಕ್ಕಳನ್ನು ಬಹಳ ವಿಚಿತ್ರವಾದ ಪ್ರಶ್ನೆಯೊಂದನ್ನು ಕೇಳುತ್ತಾರೆ. ಆ ಮಗುವಿಗೆ ಈ ಪ್ರಶ್ನೆಯೇ ಅರ್ಥವಾಗದ ವಯಸ್ಸು ಅದಾಗಿರುತ್ತದೆ. “ನೀನು ಮುಂದೆ ಏನಾಗುತ್ತೀ” ತೀರಾ ಬಾಲಿಶವಾದ, ಐಲುತನದ ಪ್ರಶ್ನೆಯಿದು. ಆ ಮಗು ಏನೆಂದು ಉತ್ತರಿಸಬೇಕು ಅದು ಗೊಂದಲಕ್ಕೀಡಾದಾಗ ಅವರ ಪೋಷಕರು ತಕ್ಷಣ, ತಾವೇ ಪ್ರತಿಕ್ರಿಯಿಸಿ ಆ ಮಗುವಿನ ಮೇಲೆ ಉತ್ತರದ ಒತ್ತಡದ ಹೇರುತ್ತಾರೆ. ‘ಡಾಕ್ಟರ್ ಆಗ್ತೀನಿ’, ‘ಇಂಜಿನಿಯರ್ ಆಗ್ತೀನಿ’-ಅಂತ ಹೇಳು ಕಂದಾ..... ಅಂತಾ ಹೀಗೊಂದು ಪ್ರಶ್ನೆ ಕೇಳಿದವರು ಉತ್ತರ ಕೊಟ್ಟವರು ಆ ಮಗುವಿನ ಒಳಭಾವದಲ್ಲಿ ಏನಾಗಿರಬಹುದು? ಆ ಮಗುವಿನ ಮುಗ್ಧತೆಗೆ ಇವರೆಷ್ಟು ವಿಕಾರವಾಗಿ ಕಂಡಿರಬಹುದು? ಎಂದೂ ನಾವು ಯೋಚಿಸಲೇ ಇಲ್ಲ. ನಮಗೆ ನಮ್ಮದೇ ಮಾತಿನ ಉತ್ತರಗಳಷ್ಟೇ ನಮಗೆ ಬೇಕು. ಪೋಷಕರು ಹೇಳಿದನ್ನೇ ಮಗು ಹೇಳಿಬಿಟ್ಟರೆ ಆ ಕ್ಷಣಕ್ಕೆ ಅವರು ಜಗತ್ತನ್ನೇ ಗೆದ್ದ ಅಲೆಗ್ಸಾಂಡರ್..... ಹೀಗೆ ವಿಚಿತ್ರ ಕೋಟೆ ಕಟ್ಟಿಕೊಂಡು ನರಳಿದ್ದೇವೆ ನಮ್ಮ ಮಕ್ಕಳನ್ನು ಸತತವಾಗಿ ನರಳಿಸುತ್ತಲೇ ಇದ್ದೇವೆ. ಏನಾಗುತ್ತೀಯಾ ಕಂದಾ ಎಂದಾಗ ಮೊದಲಿಗೆ “ಒಳ್ಳೆಯ ಮನುಷ್ಯನಾಗುತ್ತೇನೆ” ಎಂದು ಹೇಳುವ ಉತ್ತರವನ್ನೇ ಕಲಿಸಿಕೊಡುವುದು ನಮಗೆ ಸಾಧ್ಯವಾಗಿಲ್ಲ. ಆದರೂ ಮತ್ತೆ ಮತ್ತೆ ಸಂಸ್ಕಾರ ಭವ್ಯ ಪರಂಪರೆಯ ಮಾತುಗಳನ್ನು ಆಡುತ್ತಲೇ ಇದ್ದೇವೆ.

        ಈ ಶಿಕ್ಷಣವಾದರೂ ವ್ಯಾಪಾರಿಕರಣದತ್ತ ಅದೆಷ್ಟರ ಮಟ್ಟಿಗೆ ಹೆಜ್ಜೆ ಇಟ್ಟಿದೆ ಎನ್ನುವುದನ್ನು ಯಾವ ಮಾನದಂಡದಿಂದ ಅಳೆಯಬಹುದು? ಅರ್ಥವಾಗುತ್ತಿಲ್ಲ. ಶಾಲೆಗಳು ಮಾರುಕಟ್ಟೆಯ ಆಕರ್ಷಕ ಅಂಗಡಿಗಳಂತೆ ಕಾಣುತ್ತಲಿವೆ. ಈ ಬಗೆಯ ನಿರೀಕ್ಷೆಯಾರದ್ದು? ಯಾಕೆ? ಹೇಗೆ? ಮತ್ತೆ ಈ ತೆರನಾದ ಪ್ರಶ್ನೆಗಳು ವಿಚಿತ್ರವೇ ಆಗಿಬಿಡಬಹುದು. ಇಂದು ನರ್ಸರಿಯ ವಂತಿಗೆಯೇ ಐದಂಕಿಯನ್ನು ದಾಟುವಂತಿದ್ದರೆ ಅದಕ್ಕೆ ಹೊಣೆಗಾರರು ಯಾರು ಈ ಯಾವ ಕೆ.ಜಿ.ಗಳ ಕಲ್ಪನೆಯಿಲ್ಲದೆ ನಮ್ಮ ಬಾಲ್ಯಗಳು ಇದು ನಮ್ಮ ಮಕ್ಕಳಿಗೆ ಸಾಧ್ಯವೇ ಇಲ್ಲವಾದದಕ್ಕೆ ಕಾರಣರಾದರೂ ಯಾರು? ಒಂದು, ಎರಡನೇ ತರಗತಿಯ ಮಕ್ಕಳು ತಮ್ಮ ಶಾಲೆಯ ಮನೆಕೆಲಸದ ಭಾಗವಾಗಿ ಪ್ರಾಜೆಕ್ಟ್‍ಗಳನ್ನು ಮಾಡಬೇಕು ಎಂದಾದರೆ ಅದು ಕಲಿಕೆಯ ಯಾವ ಮಗ್ಗಲು, ಅದು ಮಕ್ಕಳ ಅರಿವಿನ ವಿಸ್ತರಣೆಯೋ ಪೋಷಕರಿಗೆ ಶಿಕ್ಷೆಯೋ? ಬಹುಶಃ ಅದಕ್ಕೆಂದೇ ಮಗುವಿಗೆ ಪ್ರವೇಶಾತಿ ನೀಡುವ ಮೊದಲು ಪೋಷಕರು ಶಿಕ್ಷಣ ಮಂಡಳಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಿದೆ. ತಾವು ಕೊಡ ಮಾಡುವ ಮಕ್ಕಳ ಅನವಶ್ಯಕ ಹೊರೆಗಳನ್ನು ನೀವು ಹೊರಬೇಕಿದೆ ಎಂಬ ಒಡಂಬಡಿಕೆಯ ರೂಪ ಇದೇ ಇದ್ದೀತಾ..... ತಂದೆ ತಾಯಿಗಳು ಅದೆಷ್ಟೋ ಉನ್ನತ ವಿದ್ಯಾಭ್ಯಾಸ  ಪಡೆದಿದ್ದರೂ, ಅವರು ಶಿಕ್ಷಣ ತಜ್ಞರಾಗಿರಬಹುದಾದ ವೃತ್ತಿಯಲ್ಲಿದ್ದಾಗೂ ಈ ಪ್ರಾಥಮಿಕ ಶಾಲೆಯ ಮಂಡಳಿಯಲ್ಲಿ ಸಂದರ್ಶನಕ್ಕೆ ಕುಳಿತುಕೊಂಡು ಅವರ ವಿಚಿತ್ರ ಬಾಲಿಶ ಪ್ರಶ್ನೆಗಳಿಗೆ ಅಷ್ಟೇ ವಿಚಿತ್ರವಾಗಿ ಬಾಲಿಶವಾಗಿ ಉತ್ತರಿಸಬೇಕಿದೆ.... ಇದನ್ನು ತಪ್ಪು ಎನ್ನುವವರಾದರೂ ಯಾರು? ಅದೊಂದು ಪ್ರತಿಷ್ಠಿತ ಶಾಲೆ, ಅಲ್ಲಿ ನಮ್ಮ ಮಕ್ಕಳಿಗೆ ದಾಖಲಾತಿ ಅತ್ಯಂತ ಅಗತ್ಯ ಅದು ನಮ್ಮ ಬದುಕಿನ ಅಹಂಕಾರದ ರೂಪವೂ ಹೌದು. ಹಾಗಾಗಿ ವಿದ್ಯಾವಂತ ಬಲಿಪಶುಗಳದ್ದೊಂದು ಪರಂಪರೆ. ‘ಪ್ರತಿಷ್ಠಿತ ಶಾಲೆಗಳು’ ಹಾಗೆಂದವರು ಯಾರು? ಯಾವುದು ಮಾನದಂಡ ಶೇಕಡವಾರು ಎಂಬತ್ತು-ತೊಂಭತ್ತು ದಾಟಿದ ಮಕ್ಕಳಿಗಷ್ಟೇ ದಾಖಲಾತಿ ನೀಡಿ ಉತ್ತಮ ಫಲಿತಾಂಶ ಎನ್ನುವ ಅಹಂಕಾರವನ್ನು ಅವರಿಗೆ ವಿವರಿಸಿ ಹೇಳುವುದು ಹೇಗೆ? ಹಾಗಿದ್ದು ಕೆಲವೊಮ್ಮೆ ಶೇ ನೂರರ ಫಲಿತಾಂಶವನ್ನು ತಲುಪಲಾಗದ ಕೆಲವು ಸಂಸ್ಥೆಗಳು ನಮ್ಮ ನಡುವೆ ಇರುವ ವಿಪರ್ಯಸವನ್ನು ಕೇಳಬಲ್ಲವರು ಯಾರು? ಶೇ ಮೂವತ್ತೈದರ ಆಚೀಚೆ ಇದ್ದ ವಿದ್ಯಾರ್ಥಿ ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದು ಅವರ ಪ್ರಥಮ, ದ್ವಿತೀಯ ದರ್ಜೆ ಪಾಸಾದದ್ದು ಈ ಪ್ರತಿಷ್ಠಿತ ಶಾಲೆಗಳ ರ್ಯಾಂಕಿಗಿಂತಲೂ ಸರ್ವಶ್ರೇಷ್ಠ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಇಂದು ಈ ಪ್ರತಿಷ್ಠಿತ ಶಾಲೆಗಳಲ್ಲಿ ಕೆ.ಜಿ.ಗಳ ಪ್ರವೇಶಕ್ಕೆ ನೀಡುವ ಐದಂಕಿ ಮೊತ್ತದಲ್ಲಿ ನಮ್ಮ ಉನ್ನತ ಶಿಕ್ಷಣವೇ ಮುಗಿದು ಹೋಗಿತ್ತು ಎನ್ನುವುದನ್ನು ಹೇಳುವಾಗ ಅದನ್ನೊಂದು ಶತಮಾನದ ಹಾಸ್ಯವೆಂದು ನೋಡುವ ನೋಟಗಳನ್ನು ಬದಲಾಯಿಸುವುದು ಹೇಗೆ?

         ಈಚೆಗೆ ಮತ್ತೊಂದು ವಿಚಿತ್ರತೆ ಚಾಲನೆಯಲ್ಲಿದೆ ಫಲಿತಾಂಶ ಬರುವ ಮುನ್ನವೇ ಪ್ರತಿಷ್ಠಿತ ಎಂದು ತಮಗೆ ತಾವೇ ಭಾವಿಸಿಕೊಂಡಿರುವ ಸಂಸ್ಥೆಗಳು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವ ಪ್ರಕ್ರಿಯೆ. ಇದು ಯಾವ ದುರಂತದ ಮುನ್ನುಡಿ. ಇದು ತಂದೆ-ತಾಯಿಗಳಿಗೆ ತಮ್ಮ ಮಕ್ಕಳ ಬಗೆಗಿರುವ ಅಪರಿಮಿತ ವಿಶ್ವಾಸ ಎಂದುಕೊಳ್ಳೋಣ ಆದರೆ ಈ ವಿಶ್ವಾಸ ಸಂಸ್ಥೆಗಳಿಗೆ ಹಣ ಹೂಡಿಕೆಯ ತಂತ್ರವಾಗಬೇಕೆ? ಒಂದು ವೇಳೆ ಯಾವುದೋ ವಿಪರ್ಯಾಸದ ಕಾರಣಕ್ಕೆ ವಿದ್ಯಾರ್ಥಿ ಅಂದುಕೊಂಡ ಮಟ್ಟಕ್ಕೆ ಅಂಕಗಳಿಸದೇ ಹೋದರೆ, ಪೋಷಕರು ಮುಂಗಡ ನೀಡಿದ ಶುಲ್ಕದ ಗತಿಯೇನು? ಆ ವಿದ್ಯಾರ್ಥಿಯ ಮಾನಸಿಕ ಒತ್ತಡದ ಪರಿ ಏನು? ನೆರೆ-ಹೊರೆಯವರ ಕಿರಿ-ಕಿರಿಯ ಸಾಧ್ಯತೆಗೆ ಪರಿಹಾರವೇನು? ಇದನ್ನು ಜ್ಞಾನದ ವ್ಯವಹಾರವೆನ್ನಬೇಕೇ? ದಂಧೆ ಎನ್ನಬೇಕೆ? ಫಲಿತಾಂಶಕ್ಕೆ ಮುನ್ನ ದಾಖಲಾತಿ ಒಂದು ಹುಚ್ಚುತನವಾದರೆ, ಮತ್ತೊಂದು ಅತಿರೇಕವೆಂದರೆ ಅದು ಫಲಿತಾಂಶಕ್ಕೆ ಮುನ್ನ ‘ಟ್ಯೂಷನ್’ ಎಂಬ ಮತ್ತೊಂದು ಆಮಿಷದ ಕರಾಳಮುಖ ಇದರ ಶುಲ್ಕವಾದರೂ ಮತ್ತೆ ಆರಂಕಿಯನ್ನು ದಾಟುವಂತಹದ್ದು. ಇದು ಮತ್ತೊಂದು ಪ್ರತಿಷ್ಠತೆಯ ಜಾಹಿರಾತಿನ ಪ್ರತಿಫಲ. ಇದರ ನಂತರ ಮತ್ತಾವುದೋ ಕಾಲೇಜಿಗೆ ಪ್ರವೇಶಾತಿ ಎರಡೂ ವಿಭಿನ್ನ ಮಾರ್ಗಗಳು. ಹಾಗಿದ್ದರೆ ಯಾವ ಪಾಠ ಪ್ರವಚನದ್ದು ಸರಿಯಾದ ಪ್ರಜ್ಞೆ? ಮತ್ತೆ ಪ್ರಶ್ನೆ ಉತ್ತರಿಸುವುದು ಯಾರು? ಹೇಗೆ? ಹೀಗೆ ಒಂದು ಉತ್ತಮ ‘ಟ್ಯೂಷನ್’ ಉತ್ತಮ ‘ಕಾಲೇಜು’ ಎಂಬ ಭ್ರಮೆಯಲ್ಲಿ ಅದ್ದಿ ಹೋಗುವ ಪೋಷಕರಿಗೆ ಆಕ್ಷಣದಿಂದ ನಿರಾಳತೆ ಸಾಧ್ಯವೇ? ನಾಳೆ ಅವರ ವಿದ್ಯಾಭ್ಯಾಸದೊಂದಿಗೆ ಉದ್ಯೋಗ ಖಾತ್ರಿಯೇ? ಹಾಗೆನ್ನುವ ಭ್ರಾಂತಿ ಬಿತ್ತುವ ನೂರಾರು ಜಾಹೀರಾತುಗಳು ಯಾವುದೇ ಭಯವಿಲ್ಲದೆ, ಎಗ್ಗಿಲ್ಲದೆ ಭರಾಟೆಯಲ್ಲಿ ಬದುಕನ್ನು ಅರಗಿಸಿಕೊಳ್ಳುತ್ತಿವೆ.

        ಒಟ್ಟಿನಲ್ಲಿ ನಮ್ಮ ಮಕ್ಕಳು ಡಾಕ್ಟರಾಗಿ, ಇಂಜಿನೀಯರ್ ಆಗಿ ಪದವಿ ಪಡೆಯುವಷ್ಟರ ಹೊತ್ತಿಗೆ ಈ ನೆಲದ ಶ್ರೀಸಾಮಾನ್ಯ ಕಳೆದುಕೊಳ್ಳುವುದಕ್ಕೆ ತನ್ನದು ಎನ್ನುವ ಆಸ್ತಿ ಏನನ್ನು ಉಳಿಸಿಕೊಂಡಿರಬಹುದು? ನಂತರವಾದರೂ ಮಕ್ಕಳು ಅವರ ಕನಸಿನ ರೂಪಕಗಳಾದರೆ? ಎಷ್ಟು ಗುಣಾತ್ಮಕವಾದ ಫಲಿತಗಳಿವೆ? ಈ ವೇಗದಲ್ಲಿ ಸಾಗುವ ಈ ವೈದ್ಯ ಅಭಿಯಂತರ ಸಂತತಿ ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ಎಷ್ಟಾಗಬಹುದು? ಏನಾಗಬಹುದು. ಇವರಿಗೆಲ್ಲಾ ವೃತ್ತಿಗಳನ್ನು ಒದಗಿಸಲು ಸರ್ಕಾರಗಳು ಯಾವ ಯೋಜನೆಗಳನ್ನು ರೂಪಿಸಬಹುದು. ಲಕ್ಷ ಕೋಟಿಗಳನ್ನು ಬೇಡುವ ಈ ಬಗೆಯ ವೃತ್ತಿಪರ, ಉನ್ನತಶಿಕ್ಷಣಗಳಿಂದ ವೃತ್ತಿ ಬಯಸುವವರು ಹಾಕಿದ ಬಂಡವಾಳವನ್ನು ವಾಪಾಸು ಪಡೆಯುವ ಹಠಕ್ಕೆ ಬೀಳುವುದು ಅನಿವಾರ್ಯವಾದಾಗ ಅದರ ಹೊರೆ ಭಾರವನ್ನು ಅನುಭವಿಸಬೇಕಾದವರು ಈ ನೆಲದ ಬಡಸಾಮಾನ್ಯರಲ್ಲದೆ ಬೇರಾರು? ಎಲ್ಲರೂ ಶೇ ತೊಂಭತ್ತರ ಆಚಿನ ಗುರಿ ಹೊತ್ತು ಹೊರಟು ಬಾಲ್ಯವನ್ನು ಸಂಭ್ರಮವನ್ನು ಹರೆಯದ ಉತ್ಸಾಹವನ್ನು ಜವಾಬ್ದಾರಿಯ ಸಂಸ್ಕಾರವನ್ನು ಕಳೆದುಕೊಂಡರೆ ದೇಶ ಕಟ್ಟುವುದು ಯಾರು? ಹೇಗೆ? ಎಲ್ಲಿ..... 

        ಪ್ರಳಯವೆಂದರೆ ಜಗತ್ತಿನ ವಿನಾಶವಲ್ಲ ಹೀಗೆ ಭಾಗಗಳನಾಶ ಬದುಕಿನನಾಶ ಕನಸುಗಳ ನಾಶ, ಭ್ರಮೆಗಳ ಉತ್ಕರ್ಷ..... ಎಚ್ಚೆತ್ತುಕೊಳ್ಳುವ ತುರ್ತು ತುಂಬಾ ಇದೆ. ಆಧುನಿಕ ಜಗತ್ತು ಜಾಗತೀಕರಣವನ್ನು ಮಾನವತೆಯಿಂದ ಜೀವಜೀವನ ಪ್ರೀತಿಯಿಂದ ನಿಯಂತ್ರಿಸಬೇಕಿದೆ ನಮ್ಮತನವನ್ನು ಉಳಿಸಿಕೊಂಡೇ ನಮ್ಮ ನಂತರದ ನಮ್ಮದೆ ಪೀಳಿಗೆಯನ್ನು ಜತನ ಮಾಡಿಕೊಳ್ಳಬೇಕಿದೆ.....ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸುವುದು ಫಲವಲ್ಲ............ 
                                                                                                 

No comments:

Post a Comment

ಕುವೆಂಪು ಎಂಬ ದಾರ್ಶನಿಕ          ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...

Popular Posts