Friday, 11 August 2017
ಆ ಭಾವ... ಆ ಬದುಕು...
ಮಹಾಭಾರತ ಮತ್ತೇನೋ ಆಗಬಹುದಿದ್ದ ಸಾಧ್ಯತೆಯ ದಿಕ್ಕು ತಪ್ಪಿಸಿದ ಪಾತ್ರವಾಗುವ ಭೀಷ್ಮ, ಕುರುಕ್ಷೇತ್ರವೆಂಬ ಮಹಾಸಂಗ್ರಾಮದ ಕಲ್ಪನೆಯಿಂದಲೇ ಆಚೆ ನಿಲ್ಲಿಸಬಹುದಾದ ಶಕ್ತಿಯಿದ್ದವನು, ಆದರೆ ಅದಕ್ಕಿಂತ ದೊಡ್ಡದಾದ ತುರ್ತನ್ನು ಕರ್ತವ್ಯದ ಹೆಸರಿನಿಂದಲೇ ಎದುರಾಗಿ, ಅದನ್ನು ನಿಭಾಯಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ, ತನ್ನ ಬದುಕನ್ನೇ ಮೇಣ ಮಾಡಿಕೊಂಡು ನಿರಂತರವಾಗಿ ಉರಿಯುತ್ತಲೇ ಮತ್ತಿತರರ ಬಾಳಿಗೆ ಬೆಳಕು ನೀಡುವ ತಹತಹಿಕೆಯಲ್ಲಿ ಕರಗಿಹೋದ ಪಾತ್ರ ಭೀಷ್ಮನದು.
ಯಾವುದೂ ತನ್ನದಲ್ಲ, ತನಗಲ್ಲ ಎನ್ನುವ ನಿರ್ಲಿಪ್ತತೆಯ ನಡುವೆಯೂ ಅದು ತನ್ನವರೆಂದ ಇತರರಿಗಾಗಿ ಉಳಿಯಬೇಕು, ಬೆಳೆಯಬೇಕು, ಅದು ಶ್ರೇಷ್ಠವಾಗಬೇಕು, ಕೀರ್ತಿಯಾಗಬೇಕು, ಸಾರ್ಥಕವೇ ಆಗಬೇಕು ಎಂಬೆಲ್ಲಾ ಸಮಷ್ಟಿ ಚಿಂತನೆಯ ಉತ್ಕರ್ಷದ ನೆಲೆಯಿಂದಲೂ ಭೀಷ್ಮ ಕಳೆದುಕೊಳ್ಳುತ್ತಾ, ಮತ್ತೆ ಮತ್ತೆ ನೋಯುತ್ತಾ, ಚಿರಂಜೀವಿಯಾಗುವ ಸಾಧ್ಯತೆಯಿಂದಲೇ ತಪ್ಪಿಸಿಕೊಂಡು ಸಾವಿನೆಡೆಗೆ ಸಾಗುತ್ತಾನೆ.
ಸಾಮಾಜಿಕ ಬದುಕಿನ, ಶ್ರೀಸಾಮಾನ್ಯನೊಬ್ಬನ ಬದುಕಿಗೆ ಯೋಚಿಸಲಾಗದ, ನೈತಿಕತೆಯ ಪ್ರಶ್ನೆಯಾಗುವ ಸಂಗತಿ ಇಲ್ಲಿ ಘಟಿಸುತ್ತದೆ. ಸತ್ಯವತಿಯ ಮೊದಲ ಮಗ, ವ್ಯಾಸನಿಂದ ವಂಶೋದ್ಧಾರದ ಕೆಲಸ ಅನಿವಾರ್ಯವೆನ್ನುವಂತೆ, ಶಾಸ್ತ್ರನೀತಿಯ ಸಮರ್ಥನೆಯೋಪಾದಿಯಲ್ಲಿ ಘಟಿಸುತ್ತದೆ. ಶಂತನು ಮಹಾರಾಜನ ಮೋಹ ಉಂಟುಮಾಡಿದ ಒಂದು ಘಟನೆ ಮುಂದಕ್ಕೆ ಒಂದು ಕ್ರಮ ಮೀರಿದ ಪರಂಪರೆಗೆ ನಾಂದಿಹಾಡಿದಂತೆ, ವಿಚಿತ್ರವಾದ ಹೊಸಮಾರ್ಗವನ್ನೇ ಉಂಟುಮಾಡಲು ಯತ್ನಿಸುತ್ತದೆ. ಇಂತಲ್ಲೆಲ್ಲಾ ಭೀಷ್ಮ ಅಸಹಾಯಕನಂತೆ, ಮೂಕಪ್ರೇಕ್ಷಕನಂತೆ ನಿರ್ಲಿಪ್ತವಾಗ ಬೇಕಾದ ವಿಪರ್ಯಾಸ ಘಟಿಸುತ್ತದೆ.
ತನ್ನ ಹಿರಿಯರು ಕಟ್ಟಿ ಕಾಪಾಡಿಕೊಂಡ ಸಾಮ್ರಾಜ್ಯ ವಂಶ ಪಾರಂಪರ್ಯವಾಗಿ ನಿರಂತರವಾಗಿ ಶ್ರೇಷ್ಠತೆಗಳ ಮಾದರಿಯಾಗಿಯೇ ಇರಬೇಕೆಂದು ಗಂಗಾಸುತ ಆಸೆಪಟ್ಟಿದ್ದ. ಅದೇ ವಂಶದ ಅವನ ಕಿರಿಯ ತಲೆಮಾರು ರಾಜ್ಯದಾಹದಿಂದ, ವೈಯಕ್ತಿಕ ಪ್ರತಿಷ್ಠೆಯ ಅಹಂಕಾರಗಳಿಂದ ಪರಸ್ಪರರು ಬಂಧುತ್ವವನ್ನು ಮೀರಿ ಶತ್ರುಗಳೇ ಆಗಿ, ಕುರುಕ್ಷೇತ್ರದಂತಹ ಮಹಾನಾಶದ ಮಹಾಸಂಗ್ರಾಮದೆಡೆಗೆ ದಾಪುಗಾಲಿಟ್ಟರು, ಭೀಷ್ಮನ ಬದುಕಿನ ದೊಡ್ಡವ್ಯಂಗ್ಯ ಮತ್ತು ದುರಂತ ಇಲ್ಲಿ ಕಾಣಸಿಗುತ್ತದೆ. ಇಲ್ಲಿಯೂ ಸರ್ವಸಮ್ಮತವಾದಂತೆ, ಮನಃಪೂರ್ವಕ ತೀರ್ಮಾನಕ್ಕೆ ಬದ್ಧನಾಗಲು ಅವನಿಂದ ಸಾಧ್ಯವಾಗುವುದಿಲ್ಲ.
Subscribe to:
Post Comments (Atom)
ಕುವೆಂಪು ಎಂಬ ದಾರ್ಶನಿಕ ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...
Popular Posts
-
ಮಳೆಮೋಡಗಳ, ತಂಪುಗಾಳಿಯ ಪರಿಸರ, ಪ್ರಕೃತಿಯೊಳಗೆ ಎಂತದ್ದೋ ಮಧುರ ಬದಲಾವಣೆ ಚಲಿಸುವ ಮೋಡಗಳು ಅಲ್ಲಲ್ಲಿ ನಿಂತು ನಾಲ್ಕಾರು ಹನಿ ಭುವಿಗೆ ಸಿಂಪಡಿಸಿದ ಕಾಲಕ್ಕೆ ನ...
-
ಭೀಷ್ಮಾಚಾರ್ಯ [ವಿಪರ್ಯಾಸದ ಪಿತಾಮಹ] ಬದುಕು ಎನ್ನುವ ವ್ಯಾಪ್ತಿಗೆ ಹತ್ತು-ಹಲವು ಅರ್ಥಗಳಿವೆ. ಅದರಲ್ಲಿ ಬಹಳ ಮುಖ್ಯವಾದುದು `ತ್ಯಾಗ’ ಎನ್ನುವ ಭಾವ. ಈ...
-
ಮೂಲಸೆಲೆ ಮಹಾಕಾವ್ಯ ಎನ್ನುವುದಕ್ಕಿರುವ ವ್ಯಾಪ್ತಿ ದೇಶ, ಜನಾಂಗ, ಸಮುದಾಯ, ಸಮಾಜ ಎಂಬೆಲ್ಲಾ ವಿಸ್ತೃತತೆಗೆ ಚಾಚಿಕೊಂಡಿರುತ್ತದೆ. ಅದು ಕವಿಕೃತವಾ...
No comments:
Post a Comment